ವಿಶ್ವ ಕರಾಟೆ ಕಪ್‌ನಲ್ಲಿ ಜಾಗೃತ್‌ಗೆ ಚಿನ್ನದ ಪದಕ
ಬೆಂಗಳೂರು, ಜು.13: ವಿಶ್ವ ಕರಾಟೆ ಫೆಡರೇಷನ್ ವತಿಯಿಂದ ಕ್ರೋಯೇಷಿಯಾದ ಉಮಾಗ್‌ನಲ್ಲಿ ಆಯೋಜಿಸಿದ್ದ ‘ವಿಶ್ವ ಕರಾಟೆ ಯೂಥ್ ಕಪ್-2017’ನಲ್ಲಿ ಭಾಗವಹಿಸಿದ್ದ ಎಂ.ಪಿ.ಜಾಗೃತ್ ಕತಾ ವಿಭಾಗದಲ್ಲಿ ಚಿನ್ನದ ಪದಕ ಹಾಗೂ ಕುಮಿಟೆ (ಹೋರಾಟ) ವಿಭಾಗದಲ್ಲಿ ಬೆಳ್ಳಿಯ ಪದಕ ಗೆದ್ದು, ದೇಶದ ಕೀರ್ತಿ ಹೆಚ್ಚಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾಗೃತ್ ಅವರ ತಂದೆ ಪ್ರಸಾದ್, ವಿಶ್ವ ಮಟ್ಟದಲ್ಲಿ ಆಯೋಜಿಸಿದ್ದ ಟೂನಿರ್ಮೆಂಟ್‌ನಲ್ಲಿ ವಿಶ್ವದ 64 ದೇಶಗಳಿಂದ 2,450 ಕ್ರೀಡಾಪಟುಗಳು ಭಾಗವಹಿಸಿದ್ದು, 54 ವಿಭಾಗಗಳಲ್ಲಿ ಸ್ಪರ್ಧೆಗಳಿದ್ದವು. ಅದರಲ್ಲಿ 12 ವರ್ಷ ವಯೋಮಾನದ ಕೆಳಗಿನವರ ಸ್ಪರ್ಧೆ ಕತಾ ವಿಭಾಗದಲ್ಲಿ ಜಾಗೃತ್ ಚಿನ್ನದ ಪದಕ ಹಾಗೂ ಕುಮಿಟೆ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾನೆ ಎಂದು ಹೇಳಿದರು.
ಭಾರತದಿಂದ ಇದುವರೆಗೂ ಕರಾಟೆಯಲ್ಲಿ ಯಾರೊಬ್ಬರೂ ಪದಕ ಗೆದ್ದಿರುವುದಿಲ್ಲ. ಇದೇ ಮೊದಲ ಬಾರಿಗೆ ಭಾರತದಿಂದ ಭಾಗವಹಿಸಿದ್ದ 31 ಕ್ರೀಡಾಳುಗಳ ಪೈಕಿ ಜಾಗೃತ್ ಮಾತ್ರ ಪದಕ ಗಳಿಸಿದ್ದಾರೆ. ಕಠಿಣ ಪರಿಶ್ರಮ ಹಾಗೂ ತರಬೇತಿಯಿಂದ ಈ ಸಾಧನೆ ಮಾಡಿ ಯಶಸ್ವಿಯಾಗಿದ್ದಾನೆ ಎಂದರು.





