ವಿಜ್ಞಾನ ಪರಿಷತ್ ಸಮನ್ವಯಾಧಿಕಾರಿಯಾಗಿ ಜಗದೀಶ್

ಚಿಕ್ಕಮಗಳೂರು, ಜು.13: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ 2017ನೇ ಸಾಲಿನ ಜಿಲ್ಲಾ ಸಮನ್ವಯಾಧಿಕಾರಿಯಾಗಿ ಎಂ.ಸಿ.ಜಗದೀಶ್ ಅವರನ್ನು ನೇಮಿಸಲಾಗಿದೆ ಎಂದು ರಾಜ್ಯ ಸಂಯೋಜಕ ಹೆಚ್.ಜಿ.ಹುದ್ದಾರ್ ತಿಳಿಸಿದ್ದಾರೆ.
ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾಗಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಜಗದೀಶ್ ಕುವೆಂಪು ವಿ.ವಿ.ಯಲ್ಲಿ ರಸಾಯನಶಾಸ್ತ್ರ ಸ್ನಾತಕೋತ್ತರ ಪದವೀಧರರಾಗಿದ್ದು, ಸಂಶೋಧನಾ ವಿದ್ಯಾರ್ಥಿಯಾಗಿ ಅಧ್ಯಯನಶೀಲರಾಗಿದ್ದಾರೆ. ಸಹಶಿಕ್ಷಕರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತ ಸರ್ಕಾರದ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ವೈಜ್ಞಾನಿಕ ಮನೋಭಾವ ಜಾಗೃತಿಗೊಳಿಸುವ ಕಾರ್ಯದಲ್ಲಿ ತೊಡಗಿದೆ. 2017 ರಲ್ಲಿ 25ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಸಂಘಟಿಸುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಶಿಕ್ಷಕರಿಗೆ ತರಬೇತಿ ನೀಡಿ ಶಾಲಾ ಮಕ್ಕಳಿಂದ ವಿಜ್ಞಾನದ ಯೋಜನೆಗಳನ್ನು ಮಾಡಿಸಿ ಜಿಲ್ಲೆಯಲ್ಲಿ ಬಹುಮಾನ ಕೊಡುವ ಜತೆಗೆ ರಾಜ್ಯಸ್ಪರ್ಧೆಗೆ ಕಳುಹಿಸುವ ಹೊಣೆಗಾರಿಕೆಯನ್ನು ಜಗದೀಶ್‌ಗೆ ವಹಿಸಲಾಗಿದೆ.







