81 ವರ್ಷಗಳಿಂದ ಅನಾಥ ವೃದ್ಧನ ಸೇವೆಯಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆ!
89 ವರ್ಷದ ತಿಮ್ಮಪ್ಪನೆಂದರೆ ಸಿಬ್ಬಂದಿ ವರ್ಗಕ್ಕೆ ಅಚ್ಚುಮೆಚ್ಚು

ಮಂಗಳೂರು, ಜು.13: ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಸುಮಾರು 81 ವರ್ಷಗಳಿಂದ ಸುದೀರ್ಘ ಚಿಕಿತ್ಸೆ ಪಡೆಯುತ್ತಿರುವ ತಿಮ್ಮಪ್ಪ ಎಂಬ ಅನಾಥ ವೃದ್ಧರೋರ್ವರ ಬಗ್ಗೆ ಬಹುತೇಕ ಜನರಿಗೆ ಗೊತ್ತೇ ಇಲ್ಲ. ಆಸ್ಪತ್ರೆಯ 4ನೆ ಮಹಡಿಯ "ಯು" ವಾರ್ಡ್ ನಲ್ಲಿ ದಾಖಲಾಗಿರುವ ತಿಮ್ಮಪ್ಪ ಆಸ್ಪತ್ರೆಯ ಸಿಬ್ಬಂದಿಗೆ "ಮುದ್ದಿನ ತಿಮ್ಮ"ನಾಗಿದ್ದಾರೆ.
ಕಣ್ಣು ಕಾಣದ, ಕಿವಿಯೂ ಕೇಳಿಸದ ಇವರ ಕೈ ಮತ್ತು ಕಾಲುಗಳ ಬೆರಳುಗಳು ಕುಷ್ಠರೋಗದಿಂದ ಉದುರಿ ಹೋಗಿವೆ. ಹಲ್ಲುಗಳಿಲ್ಲದ "ತಿಮ್ಮ"ನಿಗೆ ಬಾಳೆಹಣ್ಣು ಅಚ್ಚುಮೆಚ್ಚಿನ ಆಹಾರ. ಇಲ್ಲಿಯ ನರ್ಸ್ ಗಳು ಸಮಯಕ್ಕೆ ಸರಿಯಾಗಿ ಅಹಾರ ತಿನ್ನಿಸಿ, ಸ್ನಾನ ಮಾಡಿಸುತ್ತಾರೆ. ಒಮ್ಮೊಮ್ಮೆ ತಿಮ್ಮಪ್ಪ ಗಂಜಿ ಉಣ್ಣಲು, ಗುಳಿಗೆ ನುಂಗಲು ಬಾಯಿ ತೆರೆಯುವುದೇ ಇಲ್ಲವಂತೆ. ಈ ಸಂದರ್ಭ ಕಿವಿಯ ಬಳಿ ಗಟ್ಟಿಯಾಗಿ ಕೂಗಿ ಆಹಾರ ಸೇವಿಸುವಂತೆ ನರ್ಸ್ ಗಳು ಹರಸಾಹಸ ಮಾಡುತ್ತಾರೆ. ತಿಮ್ಮಪ್ಪ ಕೋಪಗೊಂಡು ಹೊಡೆದರೂ ಸಮಾಧಾನದಿಂದಲೇ ಅವರೊಡನೆ ವ್ಯವಹರಿಸುತ್ತಾರೆ.
ಹುಟ್ಟು ಕುರುಡರಾಗಿರುವ ತಿಮ್ಮಪ್ಪ 8 ವರ್ಷದ ಬಾಲಕನಾಗಿದ್ದಾಗ, ಕಣ್ಣು ಕಾಣದ ಹುಡುಗ ಎಂದು ಯಾರೋ ಅಪರಿಚಿತರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆ ನಂತರ ತನ್ನವರೆಂಬ ಯಾರೂ ಇಲ್ಲದ ಕಾರಣ ಇವರು ಇಲ್ಲೇ ಉಳಿದುಬಿಟ್ಟರು.
ಸ್ಪಷ್ಟವಾಗಿ ಮಾತನಾಡಲಾಗದ ತಿಮ್ಮಪ್ಪನ ಭಾಷೆಯನ್ನು ಇಲ್ಲಿನ ನರ್ಸ್ ಗಳು ಮಾತ್ರ ಬಲ್ಲರು. ಇವರ ಊರು, ವಿಳಾಸದ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ಎಂಟು ವರ್ಷದವರಾಗಿದ್ದಾಗ ಇವರು ಈ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರು ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸುತ್ತಾರೆ. ಈಗ ಇವರಿಗೆ 89 ವರ್ಷ. ಅಂದರೆ ಕಳೆದ 81 ವರ್ಷಗಳಿಂದ ಇವರು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತನ್ನ ಜೀವನವನ್ನೇ ಆಸ್ಪತ್ರೆಯಲ್ಲಿ ಕಳೆದಿರುವ ತಿಮ್ಮಪ್ಪರನ್ನು ಇಲ್ಲಿನ ಸಿಬ್ಬಂದಿ ತಮ್ಮ ಮನೆಯ ಸದಸ್ಯನ ರೀತಿ ಆರೈಕೆ ಮಾಡುತ್ತಾ ಬಂದಿದ್ದಾರೆ. ಯಾವುದೇ ಫಲಾಪೇಕ್ಷೆಯಿಲ್ಲದೆ 8 ದಶಕಗಳಿಂದ ತಿಮ್ಮಪ್ಪರ ಸೇವೆ ಮಾಡುತ್ತಿರುವ ಫಾದರ್ ಮುಲ್ಲರ್ ಆಸ್ಪತ್ರೆ ಹಾಗೂ ಅಲ್ಲಿನ ಸಿಬ್ಬಂದಿಯ ಕಾರ್ಯ ನಿಜಕ್ಕೂ ಪ್ರಶಂಸಾರ್ಹ.







