ರಾಜ್ಯಕ್ಕೆ ಪರ್ಯಾಯ ರಾಜಕೀಯ ನೀಡಲು ಆಮ್ ಆದ್ಮಿ ಪಕ್ಷದ ತೀರ್ಮಾನ: ಪೃಥ್ವಿ ರೆಡ್ಡಿ

ದಾವಣಗೆರೆ, ಜು.13: ಜನಪರ ಆಸಕ್ತಿ ಹೊಂದಿರುವವರನ್ನು 2018ರ ವಿಧಾನಸಭಾ ಚುನಾವಣಾ ಅಖಾಡಕ್ಕೆ ಇಳಿಸಿ, ರಾಜ್ಯಕ್ಕೆ ಪರ್ಯಾಯ ರಾಜಕೀಯ ನೀಡಲು ಆಮ್ ಆದ್ಮಿ ಪಾರ್ಟಿ ತೀರ್ಮಾನಿಸಿದೆ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ತಿಳಿಸಿದ್ದಾರೆ.
ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜನತೆ ರಾಜಕೀಯ ಬದಲಾವಣೆಯಾಗಬೇಕೆಂಬುದಾಗಿ ಬಯಸಿದ್ದಾರೆ. ಆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಬಿಟ್ಟರೆ ಬಿಜೆಪಿ, ಬಿಜೆಪಿ ಬಿಟ್ಟರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತವೆ. ಅಲ್ಲದೆ, ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಸಹ ಅವಕಾಶವಾದಿ ರಾಜಕಾರಣ ಮಾಡುತ್ತಾ ಒಮ್ಮೊಮ್ಮೆ ಬಿಜೆಪಿಯ ಜೊತೆಗೆ ಹಾಗೂ ಇನ್ನೊಮ್ಮೆಮ್ಮೆ ಕಾಂಗ್ರೆಸ್ ಜತೆ ಕೈ ಜೋಡಿಸುತ್ತಾ ರಾಜಕೀಯ ಲಾಭ ಪಡೆಯುತ್ತಿವೆ. ಈ ಮೂರು ರಾಜಕೀಯ ಪಕ್ಷಗಳು ಹಣಬಲ ಮತ್ತು ತೋಳ್ಬಲಗಳಿಂದ ಅಧಿಕಾರ ಹಿಡಿದು, ಜನರನ್ನು ವಂಚಿಸಿಕೊಂಡು ಬಂದಿವೆ ಎಂದು ಆರೋಪಿಸಿದರು.
2018ರಲ್ಲಿ ನಡೆಯುವ ವಿಧಾನಸಭಾ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನಪರ ಆಸಕ್ತಿ ಹೊಂದಿರುವವರನ್ನು ಕಣಕ್ಕಿಳಿಸಿ ಜಾತಿ, ಧರ್ಮ ಹಾಗೂ ಹಣಬಲ ಮತ್ತು ತೋಳ್ಬಲದ ಮೇಲೆ ಚುನಾವಣೆ ನಡೆಸದೇ, ಪ್ರಾಮಾಣಿಕ ಹಾಗೂ ಪಾರದರ್ಶಕವಾಗಿ ಚುನಾವಣೆ ಎದುರಿಸಿ, ರಾಜ್ಯದಲ್ಲಿ ಪರ್ಯಾಯ ರಾಜಕೀಯ ವ್ಯವಸ್ಥೆ ತರಲು ಪ್ರಯತ್ನಿಸಲಾಗುವುದು ಎಂದರು.
ಜನರಿಗೆ ಸರ್ಕಾರದಿಂದ ಏನಾಗಬೇಕು. ಹಾಗೂ ಆ ಸೌಲಭ್ಯವನ್ನು ಲಂಚ ನೀಡದೇ, ಹೇಗೆ ಪಡೆಯಬೇಕೆಂಬುದರ ಬಗ್ಗೆ ಸಾರ್ವಜನಿಕರಿಗೆ ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ವಾರ್ಡ್‌ಗಳ ಮಟ್ಟದ ಸಮಸ್ಯೆಯನ್ನು ಬಗೆಹರಿಸಲಿಕ್ಕಾಗಿಯೂ ಪಕ್ಷದ ಕಾರ್ಯಕರ್ತರು ಸಾರ್ವಜನಿಕರ ಜೊತೆಗೆ ಸೇರಿ ಹೋರಾಟ ರೂಪಿಸುತ್ತಿದ್ದಾರೆ ಎಂದು ಹೇಳಿದರು.
ಎಎಪಿ ಸಹ ಸಂಚಾಲಕ ಮೋಹನ್ ದಾಸರಿ ಮಾತನಾಡಿ, ಆಮ್ ಆದ್ಮಿ ಪಾರ್ಟಿ ಹುಟ್ಟಿ ನಾಲ್ಕೂವರೆ ವರ್ಷದಲ್ಲಿಯೇ ವೇಗವಾಗಿ ಬೆಳೆದಿದೆ. ಮೊದಲಿಗೆ ದೆಹಲಿಯ ವಿಧಾನಾಸಭೆಯ 70 ಸೀಟುಗಳ ಪೈಕಿ 67 ಸೀಟಿಗಳನ್ನು ಪಡೆದು ದೆಹಲಿಯಲ್ಲಿ ಅಧಿಕಾರ ರಚಿಸಿದರೆ, ಪಂಜಾಬ್‌ನಲ್ಲಿ 20 ಸೀಟು ಗೆಲ್ಲುವ ಮೂಲಕ ವಿರೋಧ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲದೆ, ದೆಹಲಿಯ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ 49 ಸ್ಥಾನ ಪಡೆಯುವ ಮೂಲಕ 2ನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಅಲ್ಲದೆ, ನೆರೆಯ ಗೋವಾ ರಾಜ್ಯದ ಗ್ರಾ.ಪಂ. ಚುನಾವಣೆಯಲ್ಲಿ 2 ಗ್ರಾಮ ಪಂಚಾಯತ್‌ಗಳನ್ನು ವಶಪಡಿಸಿಕೊಳ್ಳುವ ಮೂಲಕ ಪಕ್ಷ ವೇಗವಾಗಿ ಬೆಳೆಯುತ್ತಿದೆ ಎಂದರು.
ಪಕ್ಷದ ಜಿಲ್ಲಾ ಸಂಚಾಲಕ ಕೆ.ಎಲ್. ರಾಘವೇಂದ್ರ ಮಾತನಾಡಿ, ವಾರ್ಡ್ ಮಟ್ಟಗಳಲ್ಲಿ ಜನರ ಯಾವುದೇ ಸಮಸ್ಯೆ ಇದ್ದರೂ ಜನ ನಮ್ಮ ಗಮನಕ್ಕೆ ತಂದರೆ, ಅವರೊಂದಿಗೆ ಪಾಲಿಕೆ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ಹೋಗಿ ಅವರ ಸಮಸ್ಯೆಯನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಆದರೆ, ಪಾಲಿಕೆ ಸಮಸ್ಯೆ ಬಗೆಹರಿದರೆ ಅದರ ಕ್ರೇಡಿಟ್ ಆಪ್‌ಗೆ ಸೇರುತ್ತದೆ ಎಂಬ ಏಕೈಕ ಕಾರಣಕ್ಕೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಂಚಾಲಕ ವಿಜಯ ಶರ್ಮಾ, ಸಂಜಿತ್, ಯಶವಂತ್, ಸುಕುಮಾರ್, ಜ್ಞಾನಸಾಗರ್, ಗುರುಮೂರ್ತಿ ಇದ್ದರು.







