ಬಕೆಟ್ ನಲ್ಲಿ ಅಡಗಿಸಿಟ್ಟಿದ್ದ ಚಿನ್ನಾಭರಣವನ್ನು ಎಗರಿಸಿದ ಮಹಿಳೆಯರು

ಕಾಸರಗೋಡು, ಜು. 13: ಕಳ್ಳರ ಭಯದಿಂದ ಬಕೆಟ್ ನಲ್ಲಿ ಅಡಗಿಸಿಟ್ಟಿದ್ದ ಹತ್ತು ಪವನ್ ಚಿನ್ನಾಭರಣವನ್ನು ಕಳವುಗೈದ ಘಟನೆಗೆ ಸಂಬಂಧಪಟ್ಟಂತೆ ಮೂವರು ಅಲೆಮಾರಿ ಮಹಿಳೆಯರನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮೂಲತಃ ತಮಿಳುನಾಡು ನಿವಾಸಿಗಳಾದ ಪ್ರಸ್ತುತ ಕುಂಬಳೆ ಕುಂಟಗೇರಡ್ಕ ದೇವಿನಗರದಲ್ಲಿ ವಾಸಿಸುತ್ತಿರುವ ಮಂಜುಳಾ( 37), ಸರಸ್ವತಿ ( 27) ಮತ್ತು ರಾಧಿಕಾ (18) ಎಂದು ಗುರುತಿಸಲಾಗಿದೆ.
ಜು.7ರಂದು ಇರಿಯಣ್ಣಿ ಪೇರಡ್ಕದ ಕೃಷ್ಣನ್ ಎಂಬವರ ಮನೆಯಲ್ಲಿ ಈ ಕಳವು ಪ್ರಕರಣ ನಡೆದಿತ್ತು.
ಮನೆಯವರು ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಹತ್ತು ಪವನ್ ಚಿನ್ನಾಭರಣವನ್ನು ಕಳ್ಳರ ಭಯದಿಂದ ಕಪಾಟಿನಲ್ಲಿಡುವ ಬದಲು ಬಟ್ಟೆಗಳಲ್ಲಿ ಸುತ್ತಿ ಬಕೆಟ್ ನಲ್ಲಿಟ್ಟು ಅದನ್ನು ಮಂಚದಡಿಯಲ್ಲಿ ಇಟ್ಟಿದ್ದರು. ಮನೆಯವರು ಹೊರಗಡೆ ತೆರಳುವ ಸಂದರ್ಭ ಮನೆಯ ಕೀಲಿ ಕೈ ಯನ್ನು ಮನೆ ಹೊರಗಡೆ ಇರಿಸಿದ್ದ ಶರ್ಟ್ ನ ಕಿಸೆಯಲ್ಲಿಟ್ಟಿದ್ದರು.
ಈ ಕೀಲಿ ಕೈಯನ್ನು ಬಳಸಿ ಬೀಗ ತೆಗೆದು ಒಳನುಗ್ಗಿರುವ ಆರೋಪಿಗಳು ಮಂಚದಡಿಯ ಬಕೆಟ್ ನಲ್ಲಿದ್ದ ಚಿನ್ನಾಭರಣವನ್ನು ಕಳವು ಮಾಡಿ ಬೀಗ ಹಾಕಿ ಅಲ್ಲಿಂದ ಪರಾರಿಯಾಗಿದ್ದರು.
ಸಂಜೆ ಮನೆಗೆ ಬಂದಾಗ ಮಂಚದಡಿಯ ಬಕೆಟಿನಲ್ಲಿದ್ದ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಎಸೆದಿರುವುದು ಕಂಡು ಬಂದಿದ್ದು, ಪರಿಶೀಲಿಸಿದಾಗ ಚಿನ್ನಾಭರಣ ನಾಪತ್ತೆಯಾಗಿರುವುದು ಕಂಡು ಬಂತು. ಈ ಬಗ್ಗೆ ಕೃಷ್ಣ ಎಂಬವರು ಆದೂರು ಪೊಲೀಸರಿಗೆ ದೂರು ನೀಡಿದ್ದರು.
ಘಟನೆಯ ಬಗ್ಗೆ ತನಿಖೆ ನಡೆಸಿದಾಗ ಅಂದು ಮೂವರು ಅಲೆಮಾರಿ ಮಹಿಳೆಯರು ಈ ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದುದು ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಇವರನ್ನು ಕೇಂದ್ರೀಕರಿಸಿ ಪೊಲೀಸರು ತನಿಖೆ ನಡೆಸಿದ್ದು, ಅಲೆಮಾರಿ ಮಹಿಳೆಯರು ಇರಿಯಣ್ಣಿ ಬಸ್ ನಿಲ್ದಾಣ ಬಳಿ ಸುತ್ತಾಡುತ್ತಿರುವುದನ್ನು ಗಮನಿಸಿದ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಚಿನ್ನಾಭರಣದ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಆದರೆ ಇವರಿಂದ ಚಿನ್ನಾಭರಣ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದು, ಮೂವರು ಆರೋಪಿಗಳನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಆರೋಪಿಗಳನ್ನು ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ತನಿಖೆ ನಡೆಸಲು ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.







