ಪ್ರಕರಣ ಹಿಂಪಡೆಯಲು ಆಗ್ರಹಿಸಿ ಹೋರಾಟಗಾರರ ಪ್ರತಿಭಟನೆ

ಮಂಡ್ಯ, ಜು.13: ತಮಿಳುನಾಡಿಗೆ ನೀರುಹರಿಸುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ರೈತಸಂಘ, ಕರವೇ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಗುರುವಾರ ನಗರದ ತಾಲೂಕು ದಂಡಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಹೋರಾಟದಲ್ಲಿ ತೊಡಗಿದ್ದ 19 ಜನರ ವಿರುದ್ಧ ಗ್ರಾಮಾಂತರ ಠಾಣೆ ಪೊಲೀಸರು ಸಿಆರ್‌ಪಿಸಿ ಕಲಂ 107ರೀತ್ಯಾ ಪ್ರಕರಣ ದಾಖಲಿಸಿದ್ದು, ವಿಚಾರಣೆಗೆ ತಾಲೂಕು ದಂಡಾಧಿಕಾರಿ ನ್ಯಾಯಾಲಯಕ್ಕೆ ಹಾಜರಾಗುವ ಮುನ್ನ ಈ ಪ್ರತಿಭಟನೆ ನಡೆಯಿತು.
ತಾವು ನ್ಯಾಯಯುತವಾಗಿ, ಕಾನೂನಿನ ಚೌಕಟ್ಟಿನಲ್ಲಿ ತಮಿಳುನಾಡಿಗೆ ನೀರುಹರಿಸುತ್ತಿರುವುದನ್ನು ಪ್ರತಿಭಟಿಸಿದ್ದೇವೆ. ಹೆದ್ದಾರಿ ಸಂಚಾರಕ್ಕೆ ಅಡ್ಡಿಪಡಿಸಿಲ್ಲ. ಕಾನೂನು ಸುವ್ಯವಸ್ಥೆಗೆ ಭಂಗ ತಂದಿಲ್ಲ. ಆದರೂ, ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಜನವಿರೊಧಿ, ರೈತವಿರೋಧಿ ನೀತಿ, ನಿಯಮಗಳ ವಿರುದ್ಧ ಹೋರಾಡುವುದು ಪ್ರತಿಯೊಬ್ಬರ ಹಕ್ಕಾಗಿದೆ. ಇಂತಹ ಹಕ್ಕನ್ನು ದಮನ ಮಾಡಲು ಪೊಲೀಸರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಅವರು ತರಾಟೆಗೆ ತೆಗೆದುಕೊಂಡರು.
ನೀರಿಲ್ಲದೆ ರಾಜ್ಯದ ಜನಜಾನುವಾರುಗಳು ಪರದಾಡುವಂತಾಗಿದೆ. ಮೂರು ವರ್ಷದಿಂದ ಮಳೆಯಿಲ್ಲದೆ ಬೆಳೆ ಆಗಿಲ್ಲ. ಕೆಆರ್‌ಎಸ್‌ಗೆ ಅಲ್ಪಸ್ವಲ್ಪ ಬರುತ್ತಿದ್ದ ನೀರನ್ನು ತಮಿಳುನಾಡಿಗೆ ಹರಿಸಲಾಗುತ್ತಿದೆ. ಇದನ್ನು ವಿರೋಧಿಸುವವರನ್ನು ರಾಜ್ಯ ಸರಕಾರ ದಮನ ಮಾಡಲು ಹೊರಟಿದೆ ಎಂದು ಅವರು ಕಿಡಿಕಾರಿದರು.
ತಮ್ಮ ವಿರುದ್ಧ ಹಾಕಿರುವ ಸುಳ್ಳು ಪ್ರಕರಣವನ್ನು ಕೈಬಿಡಬೇಕು. ತಮಿಳುನಾಡಿಗೆ ನೀರುಹರಿಸುವುದನ್ನು ಸ್ಥಗಿತಗೊಳಿಸಿ, ಜಲಾಶಯದ ನಾಲೆಗಳಿಗೆ ಹರಿಸಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.
ಇಂಡುವಾಳು ಸಿದ್ದೇಗೌಡ, ಬಸವರಾಜು, ಚಂದ್ರಶೇಖರ್, ಬಿ.ಬೊಮ್ಮೇಗೌಡ, ಹನಿಯಂಬಾಡಿ ನಾಗರಾಜು, ಸುಧೀರ್‌ಕುಮಾರ್, ಎಚ್.ಡಿ.ಜಯರಾಂ, ಟಿ.ಕೆ.ಸೋಮಶೇಖರ್, ನಾಗೇಂದ್ರ, ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಜು.26ಕ್ಕೆ ವಿಚಾರಣೆ ಮುಂದೂಡಿಕೆ:
ನಂತರ, ತಾಲೂಕು ದಂಡಾಧಿಕಾರಿ ಮಾರುತಿ ಪ್ರಸನ್ನ ಅವರ ನ್ಯಾಯಾಲಯಕ್ಕೆ ಹಾಜರಾದ ಹೋರಾಟಗಾರರು, ತಾವು ಕಾನೂನು ಚೌಕಟ್ಟು ಮೀರಿ ಪ್ರತಿಭಟನೆ ನಡೆಸಿಲ್ಲ. ತಮ್ಮ ವಿರುದ್ಧ ಪೊಲೀಸರು ಸುಳ್ಳು ಮೊಕದ್ದಮೆ ಹೂಡಿದ್ದಾರೆ ಎಂದು ಹೇಳಿದರು.
ತಾವು ಕಾನೂನು ಸುವ್ಯವಸ್ಥೆಗೆ ಭಂಗ ತಂದಿರುವ ಬಗ್ಗೆ ಪುರಾವೆಯನ್ನು ಒದಗಿಸಬೇಕು ಎಂದು ಅವರು ಕೇಳಿದರು. ಈ ಸಂಬಂಧ ಹೆಚ್ಚಿನ ಮಾಹಿತಿ ಒದಗಿಸುವಂತೆ ಪೊಲೀಸರಿಗೆ ಸೂಚಿಸಿದ ದಂಡಾಧಿಕಾರಿಗಳು, ಸದರಿ ವಿಚಾರಣೆಯನ್ನು ಜು.26ಕ್ಕೆ ಮುಂದೂಡಿದರು.







