ವಿಸ್ತಾರಕರ ಮೂಲಕ ಕೋಮುವಾದ ವಿಸ್ತರಣೆ: ಮುಖ್ಯಮಂತ್ರಿ

ರಾಯಚೂರು, ಜು.13: ವಿಸ್ತಾರಕರ ಮೂಲಕ ಬಿಜೆಪಿ ಕೋಮುವಾದವನ್ನು ಮನೆ ಮನೆಗೆ ಹರಡುವ ಪ್ರಯತ್ನ ಮಾಡುತ್ತಿದೆ. ಆದರೆ, ರಾಜ್ಯದಲ್ಲಿ ಅವರು ಸಂಪೂರ್ಣವಾಗಿ ವಿಫಲರಾಗುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ಲಿಂಗಸುಗೂರಿನಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಾವೆಲ್ಲ ಹಿಂದೂಗಳಲ್ಲವೆ, ಹಿಂದುಗಳನ್ನು ಬಿಜೆಪಿಯವರಿಗೆ ಮಾತ್ರ ಗುತ್ತಿಗೆ ನೀಡಲಾಗಿದೆಯೆ. ಹಿಂದುತ್ವದ ಆಧಾರದಲ್ಲಿ ಸಮಾಜದಲ್ಲಿ ಜಾತಿ, ಧರ್ಮದ ಹೆಸರಿನಲ್ಲಿ ಒಡೆಯುವ ನೀಚ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಿಡಿಗಾರಿದರು.
ಬಿಜೆಪಿಯವರು ಒಂದು ಧರ್ಮದವರನ್ನು ಮತ್ತೊಂದು ಧರ್ಮದವರ ಮೇಲೆ ಎತ್ತಿಕಟ್ಟಿ, ಬೆಂಕಿ ಹಚ್ಚಿ, ಕೋಮುವಾದವನ್ನು ಹರಡಿಸುತ್ತಿದ್ದಾರೆ. ಈಗ ಅವರ ಪಕ್ಷದಲ್ಲಿ ವಿಸ್ತಾರಕರನ್ನು ನೇಮಿಸಿಕೊಂಡಿದ್ದಾರೆ. ಉತ್ತರಪ್ರದೇಶದಲ್ಲಿ ಮನೆ ಮನೆಗೆ ವಿಸ್ತಾರಕರನ್ನು ಕಳುಹಿಸಿ ಚುನಾವಣೆ ಗೆದ್ದಿದ್ದಾರಂತೆ ಎಂದು ಅವರು ಸಿದ್ದರಾಮಯ್ಯ ಹೇಳಿದರು.
ವಿಸ್ತಾರಕರು ಮನೆ ಮನೆಗೆ ಹೋಗಿ ನೀವೆಲ್ಲ ಹಿಂದೂಗಳು ಬಿಜೆಪಿಗೆ ಮತ ಹಾಕಬೇಕು ಎಂದು ಹೇಳುತ್ತಾರೆ. ಆ ಮೂಲಕ ಸಮಾಜದಲ್ಲಿ ಕೋಮುವಾದವನ್ನು ಹರಡಲು ಬಿಜೆಪಿ ಯತ್ನಿಸುತ್ತಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರು, ಹಿಂದುಳಿದ ವರ್ಗದವರು, ದಲಿತರು, ಬಡವರು ಸೇರಿದಂತೆ ಎಲ್ಲರ ಪರವಾಗಿದೆ. ನಮ್ಮ ರಾಜ್ಯದಲ್ಲಿ ಬಿಜೆಪಿ ಪ್ರಯತ್ನ ಸಂಪೂರ್ಣ ವಿಫಲವಾಗಲಿದೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.







