ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ತಡೆ
ಕೋಮು ಸಾಮರಸ್ಯಕ್ಕೆ ಧಕ್ಕೆ ತರಲು ಯತ್ನಿಸಿದ ವಿಚಾರ

ಬೆಂಗಳೂರು, ಜು.13: ಪ್ರಚೋದನಕಾರಿ ಭಾಷಣದ ಮೂಲಕ ಕೋಮು ಸಾಮರಸ್ಯಕ್ಕೆ ಧಕ್ಕೆ ತರಲು ಪ್ರಯತ್ನಿಸಿದ ಆರೋಪದ ಸಂಬಂಧ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧದ ಅಭಿಯೋಜನೆಗೆ (ಪ್ರಾಸಿಕ್ಯೂಷನ್) ಅನುಮತಿ ನೀಡಿದ ಸರಕಾರದ ಆದೇಶ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪ್ರಧಾನ ಹಿರಿಯ ನ್ಯಾಯಾಲಯದಲ್ಲಿನ ವಿಚಾರಣೆಗೆ ಹೈಕೋರ್ಟ್ ಗುರುವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಕರಣ ಸಂಬಂಧ ತಮ್ಮ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಡಾ.ಪ್ರಭಾಕರ ಭಟ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ, ಅರ್ಜಿಯ ಮುಂದಿನ ಆದೇಶದವರೆಗೆ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಜತೆಗೆ, ಅರ್ಜಿ ಸಂಬಂಧ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ(ಅಪರಾಧ), ಪುತ್ತೂರು ಟೌನ್ ಪೊಲೀಸರು ಮತ್ತು ದೂರುದಾರ ಅಶ್ರಫ್‌ಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್, ಅರ್ಜಿದಾರರು ಕೋಮು ಸೌಹಾರ್ದತೆ ಹಾಗೂ ಸಾಮರಸ್ಯ ಕದಡುವ ಯಾವುದೇ ಪ್ರಯತ್ನ ಮಾಡಿಲ್ಲ. ಅರ್ಜಿದಾರರು ಒಬ್ಬ ರಾಷ್ಟ್ರೀಯವಾದಿಯಾಗಿದ್ದು, ತಮ್ಮ ಯೋಚನೆ ಹಾಗೂ ಅಭಿಪ್ರಾಯವನ್ನು ಭಾಷಣದ ವೇಳೆ ತಿಳಿಸಿದ್ದಾರೆ. ಆದರೆ, ಅವರ ವಿರುದ್ಧ ಸುಳ್ಳು ದೂರು ದಾಖಲಿಸಲಾಗಿದ್ದು, ರಾಜಕೀಯ ಒತ್ತಡದಿಂದಾಗಿ ಅರ್ಜಿದಾರರಿಗೆ ಕಿರುಕುಳ ನೀಡಲು ಹಾಗೂ ಘನತೆ ಕುಗ್ಗಿಸಿ ಅವಮಾನ ಮಾಡಲು ಸರಕಾರದ ಒಳಾಡಳಿತ ಇಲಾಖೆಯ ಅಧೀನ ಕಾರ್ಯದರ್ಶಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಆ ಆದೇಶ ಹೊರಡಿಸುವ ಮುನ್ನ ಅಧೀನ ಕಾರ್ಯದರ್ಶಿಯು ಸೂಕ್ತವಾಗಿ ತಮ್ಮ ವಿವೇಚನೆ ಬಳಸಿಲ್ಲ. ಪ್ರಕರಣದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಲ್ಲ ಮತ್ತು ಸಕಾರಣಗಳನ್ನು ನೀಡಿಲ್ಲ. ಹೀಗಾಗಿ, ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಅರ್ಜಿದಾರರ ವಿರುದ್ಧದ ಪ್ರಾಸಿಕ್ಯೂಷನ್‌ಗೆ ತಡೆಯಾಜ್ಞೆ ನೀಡಿತು.
ಪ್ರಕರಣವೇನು:? ವಿಶ್ವ ಹಿಂದು ಪರಿಷತ್ ದಕ್ಷಿಣ ಕನ್ನಡ ಜಿಲ್ಲೆಯ ಬಂಟಾಳ್ವ ತಾಲೂಕಿನಲ್ಲಿ 2015ರ ಜನವರಿ 23ಕ್ಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೋಮು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ಪುತ್ತೂರು ಟೌನ್ ಪೊಲೀಸರಿಗೆ ಅಶ್ರಫ್ ಎಂಬಾತ ದೂರು ಸಲ್ಲಿಸಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು, ಪ್ರಭಾಕರ್ ಭಟ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿ, ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದರು. ಅದರಂತೆ ಸರಕಾರದ ಒಳಾಡಳಿತ ಅಧೀನ ಕಾರ್ಯದರ್ಶಿ ಡಿ.ಸುಗುಣ ಅವರು 2017ರ ಮಾರ್ಚ್ 8ರಂದು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಅದನ್ನು ಪರಿಗಣಿಸಿದ ಪುತ್ತೂರು ಪ್ರಧಾನ ಹಿರಿಯ ನ್ಯಾಯಾಲಯವು ಸಮನ್ಸ್ ಜಾರಿ ಮಾಡಿತ್ತು. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಪ್ರಭಾಕರ ಭಟ್ ಅವರು ತಮ್ಮ ವಿರುದ್ಧದ ಈ ಪ್ರಕರಣ ರದ್ದುಪಡಿಸಲು ಕೋರಿದ್ದರು.







