ಡೈರಿ ಪ್ರಕರಣ: ಎಫ್‌ಐಆರ್, ಮುಂದಿನ ಪ್ರಕ್ರಿಯೆಗಳಿಗೆ ಹೈಕೋರ್ಟ್ ತಡೆ
.jpg)
ಬೆಂಗಳೂರು, ಜು.13: ಕಾಂಗ್ರೆಸ್ ನಾಯಕರಿಗೆ ಹಣ ಪಾವತಿಸಿದ ಡೈರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿರಾನಗರ ಪೊಲೀಸರು ಹಾಕಿದ್ದ ಎಫ್‌ಐಆರ್ ಹಾಗೂ ಅನಂತರದ ಮುಂದಿನ ಪ್ರಕ್ರಿಯೆಗಳಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಆದಾಯ ತೆರಿಗೆ ಇಲಾಖೆಯ ಪ್ರಧಾನ ಆಯುಕ್ತರು, ಆದಾಯ ತೆರಿಗೆ ಇಲಾಖೆ ಮಹಾನಿರ್ದೇಶಕರು(ತನಿಖೆ) ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ಅರವಿಂದ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ನ್ಯಾಯಾಲಯ ಬೆಂಗಳೂರು ಪೂರ್ವ ವಲಯದ ಉಪ ಪೊಲೀಸ್ ಆಯುಕ್ತರು, ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಮತ್ತು ಇಂದಿರಾನಗರ ಪೊಲೀಸ್ ಠಾಣೆಯ ಎಸ್‌ಎಚ್‌ಒಗೆ ನೋಟಿಸ್ ಜಾರಿಗೊಳಿಸಿದೆ. 2016ರ ಮಾ.15ರಂದು ಗೋವಿಂದರಾಜು ನಿವಾಸದ ಮೇಲೆ ದಾಳಿ ನಡೆಸಲಾಗಿತ್ತು. ಆಗ ಮನೆಯ ಬೆಡ್ ರೂಮ್‌ನಲ್ಲಿ ಅವರ ಪತ್ನಿ ಹಾಗೂ ಕುಟುಂಬದವರ ಸಮಕ್ಷಮದಲ್ಲೇ ಡೈರಿಯನ್ನು ವಶಪಡಿಸಿಕೊಳ್ಳಲಾಗಿದೆ. ಆ ಬಗ್ಗೆ ಅವರು ಯಾವುದೇ ತಕರಾರು ತೆಗೆದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ.
ಅಲ್ಲದೆ, ಡೈರಿಯಲ್ಲಿನ ವಿವರಗಳನ್ನು ಇಲಾಖೆ ಯಾರಿಗೂ ಸೋರಿಕೆ ಮಾಡಿಲ್ಲ. ಅದರ ಸ್ಕಾನ್ ಮಾಡಿದ ಪ್ರತಿಯನ್ನು ಗೋವಿಂದರಾಜು ಅವರಿಗೂ ನೀಡಲಾಗಿದೆ. ಆದರೆ, ಆ ಬಗ್ಗೆ ಹಲವು ವಲಯಗಳಲ್ಲಿ ಬೇರೆ ಬೇರೆ ರೀತಿಯ ಹೇಳಿಕೆಗಳು ಬರುತ್ತಿವೆ. ಆದಾಯ ತೆರಿಗೆ ಇಲಾಖೆಯ ತನಿಖಾ ವಿಭಾಗದ ಬಳಿ ಇದ್ದ ಡೈರಿಯ ವಿವರವನ್ನು ಟ್ಯಾಂಪರ್ ಮಾಡಲು ಯತ್ನಿಸಿದ್ದರಿಂದ ವಿವರವನ್ನು ವಶಪಡಿಸಿಕೊಳ್ಳುವಂತೆ ಪೊಲೀಸರಿಗೆ ನೋಟಿಸ್ ನೀಡಲಾಗಿತ್ತು ಎಂದು ಇಲಾಖೆ ಅರ್ಜಿಯಲ್ಲಿ ತಿಳಿಸಿದೆ.







