ಅಕ್ರಮ ಕಲ್ಲು ಗಣಿಗಾರಿಕೆ: 48 ವ್ಯಕ್ತಿ, ಕಂಪನಿಗಳ ವಿರುದ್ಧ ಎಫ್‌ಐಆರ್

ಮಂಡ್ಯ, ಜು.13: ಪಾಂಡವಪುರ ತಾಲೂಕು ಚಿನಕುರಳಿ ಗ್ರಾಮದ ಸರ್ವೆ ನಂ.80, ಬೇಬಿ ಬೆಟ್ಟದ ಕಾವಲು ಸರ್ವೆ ನಂ-1ರಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವ 48 ವ್ಯಕ್ತಿಗಳು ಹಾಗೂ ಕಂಪನಿ ವಿರುದ್ಧ ಮೂರು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೆ.ಎಂ.ನಾಗಭೂಷಣ್ ನೀಡಿರುವ ದೂರಿನನ್ವಯ, ಕಲಂ ಎಂಎಂಆರ್‌ಡಿ ಕಾಯ್ದೆ 1957ರ 4(1), 4(1ಎ)1, 1-ಎ, 2 ಮತ್ತು 23-ಎ1 ಹಾಗೂ ಕೆಎಂಎಂಸಿ ರೂಲ್ 1994 3(1), 42(1) ಹಾಗೂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪಾಂಡವಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಸಾರ್ವಜನಿಕರು ನೀಡಿದ ದೂರಿನನ್ವಯ ಸ್ಥಳ ಪರಿಶೀಲನೆ ವೇಳೆಯಲ್ಲಿ ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿರುವುದು ಕಂಡುಬಂದಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಕೆ.ಎಂ.ನಾಗಭೂಷಣ್ ಪಾಂಡವಪುರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಉಪಖನಿಜ ರಿಯಾಯಿತಿ ನಿಯಮಾವಳಿ-1994 ನಿಯಮ 3(1), 42(1) ನೇರ ಉಲ್ಲಂಘನೆಯಾಗಿದ್ದು, ಸದರಿ ಕೃತ್ಯವೆಸಗಿ ಕಳ್ಳತನದಿಂದ ಗಣಿಗಾರಿಕೆ ಮಾಡಿರುವವರ ವಿರುದ್ಧ ಎಂಎಂಆರ್‌ಡಿ ಕಾಯ್ದೆ-1957ರ ಕಲಮು 1, 1ಎ, 2 ಮತ್ತು 23-ಎ1 ಮತ್ತು ಐಪಿಸಿ ಸೆಕ್ಷನ್-379ರಡಿಯಲ್ಲಿ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸುವಂತೆ ಭೂವಿಜ್ಞಾನಿ ದೂರಿನಲ್ಲಿ ಕೋರಿದ್ದಾರೆ.
ಯಾವುದೇ ಕ್ರಮ ಕೈಗೊಂಡಿಲ್ಲ: ತಾನು ರಾಜ್ಯ ಸರಕಾರ ಮತ್ತು ಲೋಕಾಯುಕ್ತರಿಗೆ ಅಕ್ರಮ ಕಲ್ಲುಗಣಿಗಾರಿಕೆ ನಡೆಸುತ್ತಿರುವ ಕುರಿತು ಕ್ರಮಕ್ಕಾಗಿ ದೂರು ನೀಡಿದ್ದು, ಅದರನ್ವಯ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆಯೇ ಹೊರತು ಯಾರನ್ನೂ ಬಂಧಿಸಿ ಕ್ರಮಕೈಗೊಂಡಿಲ್ಲ ಎಂದು ಆರ್‌ಟಿಐ ಕಾರ್ಯಕರ್ತ ಕೆ.ಆರ್.ರವೀಂದ್ರ ಆರೋಪಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಪಾಂಡವಪುರ ತಾಲೂಕು ಚಿನಕುರಳಿ, ಬೇಬಿಬೆಟ್ಟದ ಸಾವಿರಾರು ಅರಣ್ಯ ಪ್ರದೇಶದಲ್ಲಿ ಸಂಸದ ಸಿ.ಎಸ್.ಪುಟ್ಟರಾಜು ಪಾಲುದಾರಿಕೆಯ ಕಂಪನಿ ಸೇರಿದಂತೆ ಹಲವರು ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಸಿ ಸುಮಾರು ಎರಡೂವರೆ ಕೋಟಿ ರೂ. ಅಕ್ರಮ ವ್ಯವಹಾರ ನಡೆಸಿದ್ದಾರೆ ಎಂದು ದೂರಿದರು.
ಕೆಲವು ದಿನಗಳ ಹಿಂದೆ ಅಕ್ರಮ ಕಲ್ಲುಗಣಿಗಾರಿಕೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಸಂಸದ ಪುಟ್ಟರಾಜು ಮತ್ತು ಕುಟುಂಬದ ವ್ಯಕ್ತಿಗಳ ಪಾಲುದಾರರ ಕಂಪನಿಯಾದ ಎಸ್.ಟಿ.ಜಿ.ಅಸೋಷಿಯೇಟ್ಸ್‌ಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ 40 ಲಕ್ಷ ರೂ. ದಂಡ ವಿಧಿಸಿದೆ. ಆದರೆ, ಪೊಲೀಸರಿಗೆ ನೀಡಿರುವ ದೂರಿನಲ್ಲಿ ಪುಟ್ಟರಾಜು ಮತ್ತು ಅವರ ಕುಟುಂಬದವರ ಹೆಸರು ಪ್ರಸ್ತಾಪವಾಗಿಲ್ಲ ಎಂದು ರವೀಂದ್ರ ಹೇಳಿದರು.
ಅಕ್ರಮ ಕಲ್ಲುಗಣಿಗಾರಿಕೆಯಲ್ಲಿ ಪ್ರಬಲ ವ್ಯಕ್ತಿಗಳು ಪಾಲುದಾರರಾಗಿದ್ದು, ಅವರನ್ನು ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ರಕ್ಷಿಸಲು ಹೊರಟಿದ್ದಾರೆ ಎಂದು ಆರೋಪಿಸಿದ ಅವರು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಒತ್ತಾಯಿಸಿದರು.







