4ರಿಂದ 7ನೇ ತರಗತಿವರೆಗೆ ಪಬ್ಲಿಕ್ ಪರೀಕ್ಷೆ: ತನ್ವೀರ್ ಸೇಠ್

ಬೆಂಗಳೂರು, ಜು.13: ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಸರಕಾರಿ, ಅನುದಾನಿತ ಶಾಲೆಗಳಲ್ಲಿ 4ರಿಂದ 7ನೆ ತರಗತಿವರೆಗೆ ತಾಲೂಕು ಮಟ್ಟದಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ.
ಗುರುವಾರ ನಗರದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೆ 4 ಮತ್ತು 6ನೇ ತರಗತಿಗಳಿಗೆ ತಾಲೂಕು ಮಟ್ಟದಲ್ಲಿ ಪಬ್ಲಿಕ್ ಪರೀಕ್ಷೆ ನಡೆಸಲಾಗುತ್ತಿದ್ದು, ಅದನ್ನು 5 ಮತ್ತು 7ನೆ ತರಗತಿಗಳಿಗೂ ವಿಸ್ತರಿಸಲಾಗುವುದು ಎಂದು ತಿಳಿಸಿದರು.
ಪೂರಕ ಪರೀಕ್ಷೆ: 4ರಿಂದ 7ನೆ ತರಗತಿಯ ತಾಲೂಕು ಮಟ್ಟದಲ್ಲಿ ಪಬ್ಲಿಕ್ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯನ್ನು ನಡೆಸಲಾಗವುದು. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡುವುದರ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲಾಗುವುದು. ಇದೇ ಸಂದರ್ಭದಲ್ಲಿ ಶಿಕ್ಷಕರಿಗೂ ಉತ್ತಮ ತರಬೇತಿ ನೀಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಹೈ-ಕ ಭಾಗಕ್ಕೆ 5,400 ಶಿಕ್ಷಕರು: ಹೈ-ಕರ್ನಾಟಕದ ಭಾಗಗಳಲ್ಲಿ 6826 ಪ್ರಾಥಮಿಕ ಶಿಕ್ಷಕರ ಹುದ್ದೆಗಳು ಖಾಲಿಯಿದ್ದು, ಇದರಲ್ಲಿ 5400 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಉಳಿದ ಹುದ್ದೆಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಕನ್ನಡ ಕಲಿಸದ ಶಾಲೆಗಳ ಎನ್‌ಒಸಿ ರದ್ದು
ಸಿಬಿಎಸ್ಸಿ ಸೇರಿದಂತೆ ಎಲ್ಲ ಕೇಂದ್ರಾಡಳಿತ ಶಾಲೆಗಳಲ್ಲಿ ಒಂದು ವಿಷಯವಾಗಿ ಕನ್ನಡವನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸುತ್ತೋಲೆಯನ್ನು ಹೊರಡಿಸಲಾಗಿದೆ. ಸರಕಾರದ ಆದೇಶವನ್ನು ಉಲ್ಲಂಘಿಸಿ ಕನ್ನಡ ಭಾಷೆಯನ್ನು ಕಲಿಸದ ಶಾಲೆಗಳ ಎನ್‌ಒಸಿಯನ್ನು ರದ್ದು ಮಾಡಲಾಗುವುದು.
-ತನ್ವೀರ್ ಸೇಠ್ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ







