ವಿಷ ಸೇವಿಸಿದ್ದ ಕಾಲೇಜು ವಿದ್ಯಾರ್ಥಿಯ ಮೃತ್ಯು

ಪುತ್ತೂರು, ಜು.13: ವಾರದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಈಶ್ವರಮಂಗಲ ಸಮೀಪದ ಪಟ್ರೋಡಿ ನಿವಾಸಿ ಶಂಕರ ಮುಖಾರಿ ಅವರ ಪುತ್ರ, ಪುತ್ತೂರಿನ ವಿವೇಕಾನಂದ ಪದವಿ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಸಂದೇಶ್ (18) ಮೃತಪಟ್ಟ ವಿದ್ಯಾರ್ಥಿ.
ಎಂದಿನಂತೆ ಕಳೆದ ಜು.4ರಂದು ಬೆಳಿಗ್ಗೆ ಕಾಲೇಜಿಗೆ ಹೋಗಿದ್ದ ಸಂದೇಶ್ ಸಂಜೆ ಕಾಲೇಜಿನಿಂದ ಮನೆಗೆ ಬಂದು ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿದ ಬಳಿಕ ವಾಂತಿ ಮಾಡತೊಡಗಿದ್ದ. ಈ ಹಿನ್ನಲೆಯಲ್ಲಿ ಮನೆಯವರು ಆತನನ್ನು ಪುತ್ತೂರಿನ ‘ಪುತ್ತೂರು ಸಿಟಿ’ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದರು. ನಾಲ್ಕು ದಿನಗಳ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಸ್ ಹೆಗ್ಡೆ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಸಂದೇಶ್ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ದ್ವಿತೀಯ ಪಿಯುಸಿ ಪೂರೈಸಿದ್ದ ಸಂದೇಶ್ ಬಳಿಕ ಪದವಿ ಶಿಕ್ಷಣಕ್ಕೆ ಮೂಡಬಿದ್ರೆಯ ಆಳ್ವಾಸ್ ಕಾಲೇಜಿಗೆ ತನ್ನನ್ನು ಸೇರಿಸುವಂತೆ ಹಠ ಹಿಡಿದ್ದಿದ್ದ. ಆದರೆ ಬಡತನದಲ್ಲಿರುವ ಹೆತ್ತವರು ಆತನನ್ನು ಪುತ್ತೂರಿನ ವಿವೇಕಾನಂದ ಕಾಲೇಜಿಗೆ ಸೇರಿಸಿದ್ದರು. ತಾನು ಶಿಕ್ಷಣ ಪಡೆಯಲು ಇಚ್ಚಿಸಿದ ಕಾಲೇಜಿನಲ್ಲಿ ಅವಕಾಶವಾಗಿಲ್ಲ ಎಂದು ಮಾನಸಿಕವಾಗಿ ನೊಂದುಕೊಂಡಿದ್ದ ಆತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದ್ದು, ವಿಷ ಸೇವಿಸಿದ ವಿಚಾರ ಮನೆಯಲ್ಲಿ ಯಾರ ಗಮನಕ್ಕೂ ಬಂದಿರಲಿಲ್ಲ. ಆತ ಯಾವ ವಿಷ ಸೇವಿಸಿದ್ದನೆಂಬುವುದು ಇನ್ನೂ ದೃಢಪಟ್ಟಿಲ್ಲ.
ತಂದೆ ಶಂಕರ ಮುಖಾರಿ ಅವರು ನೀಡಿದ ದೂರಿನಂತೆ ಸಂಪ್ಯ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಂಗಳೂರಿನ ಕೆಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು.







