ಸಂಘಪರಿವಾರದ 24 ಕಾರ್ಯಕರ್ತರ ಹತ್ಯೆಯಲ್ಲಿ ಸಿಎಂ ಕೈವಾಡ: ಯಡಿಯೂರಪ್ಪ

ಉಡುಪಿ, ಜು.13: ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ 24 ಸಂಘಪರಿವಾರ ಕಾರ್ಯಕರ್ತರ ಹತ್ಯೆ ನಡೆದಿದ್ದು, ಇದೊಂದು ವ್ಯವಸ್ಥಿತ ಪಿತೂರಿಯಾಗಿದೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈವಾಡ ಇದೆ. ಈ ಎಲ್ಲ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳದಿಂದ ನಡೆಸಿದರೆ ಮಾತ್ರ ಸತ್ಯ ಹೊರ ಬರಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಂಟ್ವಾಳದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಮತ್ತು ಸಂಘ ಪರಿವಾರದ ನಾಯಕರನ್ನು ಮಟ್ಟ ಹಾಕಲು ರಾಜ್ಯ ಸರಕಾರ ರೂಪಿಸುತ್ತಿರುವ ವ್ಯವಸ್ಥಿತ ಪಿತೂರಿಯನ್ನು ವಿರೋಧಿಸಿ ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಗುರುವಾರ ಉಡುಪಿಯ ಜಟ್ಕಾ ಸ್ಟಾಂಡ್ ಬಳಿ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಕೇರಳ ಸಂಸದ ವೇಣುಗೋಪಾಲ್ ಕರ್ನಾಟಕ ಉಸ್ತುವಾರಿ ವಹಿಸಿಕೊಂಡ ಬಳಿಕ ರಾಜ್ಯದಲ್ಲಿ ಜಾತಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ವೇಣು ಗೋಪಾಲ್ ಕೇರಳ ಮಾದರಿಯಲ್ಲಿ ಗಲಭೆ ನಡೆಸಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಜು.27ರಂದು ರಾಜ್ಯದ ಮೂವರು ಕೇಂದ್ರ ಸಚಿವರು ಹಾಗೂ ಸಂಸದರು ಗೃಹ ಸಚಿವರಿಗೆ ಇಲ್ಲಿನ ಘಟನೆಯ ಕುರಿತು ವರದಿಯನ್ನು ನೀಡಲಿದ್ದೇವೆ. ಅಗತ್ಯ ಬಿದ್ದರೆ ಪ್ರಧಾನ ಮಂತ್ರಿಯನ್ನೂ ಭೇಟಿ ಮಾಡಲಾಗುವುದು. ಈಗಾಗಲೇ ರಾಜ್ಯಪಾಲರು ಕೇಂದ್ರಕ್ಕೆ ವರದಿ ನೀಡಿರು ವುದಾಗಿ ಮಾಹಿತಿ ದೊರೆತಿದೆ ಎಂದರು.
ಸರಕಾರ ಪೊಲೀಸರಿಗೆ ಪೂರ್ಣ ಅಧಿಕಾರ ಕೊಟ್ಟು, ಸೇಡು ತೀರಿಸುವ ಕೆಲಸ ಮಾಡುವ ಕೆಂಪಯ್ಯರನ್ನು ವಾಪಾಸು ಕರೆಸಿಕೊಳ್ಳಬೇಕು. ಪೊಲೀಸರಿಗೆ ಮಾನ ಮಾರ್ಯದೆ ಕಿಂಚಿತ್ತಾದರೂ ಇದ್ದರೆ ಕೆಂಪಯ್ಯ ಕೈ ಕೆಳಗೆ ಕೆಲಸ ಮಾಡದೆ ಹೊರ ಬರಬೇಕು ಎಂದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯಚಂದ್ರರಷ್ಟೆ ಸತ್ಯ. ನಾವು ಅಧಿಕಾರಕ್ಕೆ ಬಂದರೆ ಈ ನಾಡಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುತ್ತೇವೆ. ಎಂದಿಗೂ ಸೇಡಿನ ರಾಜಕಾರಣ ಮಾಡಲ್ಲ ಎಂದು ತಿಳಿಸಿದರು.
ಶೋಭಾ ಕರಂದ್ಲಾಜೆ ಹಾಗೂ ಸದಾನಂದ ಗೌಡ ಅವರಿಗೆ ತಮ್ಮ ಎದುರು ಚುನಾವಣೆ ನಿಂತು ಗೆಲ್ಲುವಂತೆ ಸವಾಲು ಹಾಕಿರುವ ರಮಾನಾಥ ರೈ ಹಾಗೂ ಯು.ಟಿ.ಖಾದರ್ ಅವರೇ, ನಿಮ್ಮ ಮುಂದೆ ಚುನಾವಣೆ ನಿಂತು ಗೆಲ್ಲಲು ನಮ್ಮ ಸಾಮಾನ್ಯ ಕಾರ್ಯಕರ್ತರು ಸಜ್ಜಾಗಿದ್ದಾರೆ. ಅದಕ್ಕೆ ಶೋಭಾ, ಸದಾನಂದ ಗೌಡ ಬೇಕಾಗಿಲ್ಲ ಎಂದು ಯಡಿಯೂರಪ್ಪ ತಿರುಗೇಟು ನೀಡಿದರು.
ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯ ಸರಕಾರಕ್ಕೆ ತಾಕತ್ತಿದ್ದರೆ ನನ್ನನ್ನು ಮತ್ತು ಪ್ರಭಾಕರ ಭಟ್‌ರನ್ನು ಬಂಧಿಸಲಿ. ಕಾಂಗ್ರೆಸ್‌ನ ಶವ ಪೆಟ್ಟಿಗೆಗೆ ಕೊನೆಯ ಮೊಳೆಯನ್ನು ನಮ್ಮ ಯುವಕರು ರಾಜ್ಯದಲ್ಲಿ ಹೊಡೆಯಲಿದ್ದಾರೆ ಎಂದರು. ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ಯಾರಿಗೆ ಯಾವಾಗ ಪಾಠ ಕಲಿಸಬೇಕೆಂಬುದು ಗೊತ್ತು ಎಂದು ಅವರು ಪೊಲೀಸ್ ಇಲಾಖೆಯನ್ನುದ್ದೇಶಿಸಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಮಾತನಾಡಿದರು.
ಜಿಪಂ ಅಧ್ಯಕ್ಷ ದಿನಕರ ಬಾಬು, ಮುಖಂಡರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಲಾಲಾಜಿ ಆರ್.ಮೆಂಡನ್, ಸುಕುಮಾರ್ ಶೆಟ್ಟಿ, ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು. ಯಶ್ಪಾಲ್ ಸುವರ್ಣ ಸ್ವಾಗತಿಸಿ ದರು. ಸುರೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಸುನೀಲ್ ಪ್ರಚೋದನಕಾರಿ ಭಾಷಣ!
ರಾಜ್ಯ ಕಾಂಗ್ರೆಸ್ ಸರಕಾರದಿಂದ ಹಿಂದೂಗಳಿಗೆ ರಕ್ಷಣೆ ಇಲ್ಲವಾಗಿದೆ. ಹೀಗಾಗಿ ಮುಂದಿನ ಆಯುಧ ಪೂಜೆ ದಿನ ಹಿಂದೂಗಳ ಮನೆಗಳಲ್ಲಿ ಶಸ್ತ್ರಗಳನ್ನು ಇಟ್ಟು ಪೂಜೆಗಳನ್ನು ಮಾಡಿ ಹಿಂದೂಗಳನ್ನು ರಕ್ಷಿಸುವ ಕೆಲಸ ಮಾಡಬೇಕು ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಕರೆ ನೀಡಿದ್ದಾರೆ.
ಹಿಂದೂ ಮನೆಗಳಿಗೆ ನುಗ್ಗಲು ಇರುವ ಧೈರ್ಯ ಮುಸ್ಲಿಮರ ಮನೆಗಳಿಗೆ ನುಗ್ಗಲು ಇಲ್ಲದಕ್ಕೆ ಪೊಲೀಸರನ್ನು ಷಂಡರು ಅಂತ ಶೋಭಾ ಕರಂದ್ಲಾಜೆ ಕರೆದದ್ದು. ಇನ್ನು ಎಂಟು ತಿಂಗಳಲ್ಲಿ ನಮ್ಮ ಸರಕಾರ ಬರುತ್ತದೆ. ಆಗ ಸ್ವಾಭಿಮಾನಿ ಹಿಂದೂ ಸಮಾಜ ಎದ್ದು ನಿಂತು ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ಅವರು ತಿಳಿಸಿದರು.







