ಕಾಲ್ನಡಿಗೆಯಲ್ಲಿ ದೇಶ ಸುತ್ತಿ ಬಂದ ಕೆದಿಲಾಯರಿಗೆ ಅಭಿನಂದನೆ

ಉಡುಪಿ, ಜು.13: ಸುಮಾರು ಐದು ವರ್ಷಗಳ ಕಾಲ ಕಾಲ್ನಡಿಗೆಯಲ್ಲೇ ದೇಶವನ್ನು ಸುತ್ತಿ 25 ರಾಜ್ಯಗಳನ್ನು ಹಾದು ಸುಮಾರು 23,100ಕಿ.ಮೀ.ಗಳನ್ನು ಕ್ರಮಿಸಿದ ಪುತ್ತೂರು ಮೂಲದ ಹಿರಿಯ ಆರ್‌ಎಸ್‌ಎಸ್ ಪ್ರಚಾರಕ ಸೀತಾರಾಮ ಕೆದಿಲಾಯ ಅವರನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣ ದಲ್ಲಿ ಪರ್ಯಾಯ ಶ್ರೀಪೇಜಾವರ ಮಠದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭಾರತದ ಮುಖ್ಯವಾಗಿ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳ ಜನರಲ್ಲಿ ಗೋಸಂರಕ್ಷಣೆ, ಪರಿಸರ ಕಾಳಜಿ, ಸಂಸ್ಕೃತಿ ರಕ್ಷಣೆಯನ್ನು ಜಾಗೃತ ಗೊಳಿಸುವ ಸಲುವಾಗಿ ಅವರು ಕಾಲ್ನಡಿಗೆ ಪ್ರವಾಸವನ್ನು ಕೈಗೊಂಡಿದ್ದರು. 4 ವರ್ಷ 11 ತಿಂಗಳ ಹಿಂದೆ ಕನ್ಯಾಕುಮಾರಿಯಿಂದ ಪ್ರಾರಂಭಿಸಿದ ಅವರ ಕಾಲ್ನಡಿಗೆ ಪ್ರವಾಸ ಕಳೆದ ರವಿವಾರ ಅದೇ ಸ್ಥಳದಲ್ಲಿ ಮುಕ್ತಾಯಗೊಂಡಿತ್ತು.
69ರ ಹರೆಯದ ಸೀತಾರಾಮ ಕೆದಿಲಾಯರನ್ನು ಅಭಿನಂದಿಸಿ ಮಾತನಾಡಿದ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು, ಇಡೀ ಭಾರತವನ್ನು ಸುಮಾರು 28,000 ಕಿ.ಮೀ. ನೇರವಾಗಿ ಮತ್ತು ಸುಮಾರು 20000 ಕಿ.ಮೀ ಪರೋಕ್ಷವಾಗಿ ಕಾಲ್ನಡಿಗೆಯಲ್ಲಿ ಪರಿಕ್ರಮಿಸಿ ಮತ್ತು ಗ್ರಾಮಗಳಲ್ಲಿ ವಾಸ್ತವ್ಯವಿದ್ದು ಜನರನ್ನು ನೇರವಾಗಿ ಸಂಪರ್ಕಿಸಿದ ಕೆದಿಲಾಯರು, ಸನ್ಯಾಸಿಗಳು ಮಾಡಬೇಕಾದ ಗ್ರಾಮ ಪರ್ಯಟನೆಯನ್ನು ಮಾಡಿದ್ದಾರೆ ಎಂದರು.





