ಮರಳುಕಲಾವಿದ ಪಟ್ನಾಯಕ್ ಆಸ್ಪತ್ರೆಗೆ ದಾಖಲು
ಉಪವಾಸ ಸತ್ಯಾಗ್ರಹ ಸಂದರ್ಭ ಅಸ್ವಸ್ಥ

ಭುವನೇಶ್ವರ, ಜು.13: ಪುರಿ ನಗರದಲ್ಲಿರುವ ಸಮುದ್ರ ತೀರದ ಸ್ವಚ್ಛತೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಂದರ್ಭ ಅಸ್ವಸ್ಥಗೊಂಡ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಜ್ವರದಿಂದ ಬಳಲುತ್ತಿದ್ದ ಅವರ ರಕ್ತದೊತ್ತಡ ಕುಸಿದ ಕಾರಣ ಅವರನ್ನು ಭುವನೇಶ್ವರದ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಟ್ನಾಯಕ್ ಅವರ ಮಿತ್ರರು ತಿಳಿಸಿದ್ದಾರೆ. ಅವರ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಪುರಿ ನಗರದ ಬಂಕಿಮುಹನ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳು ಮತ್ತಿತರ ಕಸ ಕಡ್ಡಿಗಳನ್ನು ರಾಶಿ ಹಾಕಲಾಗುತ್ತಿದೆ. ಇಲ್ಲಿರುವ ಚರಂಡಿಯ ನಾಲೆ ಮೂಲಕ ಇವು ಸಮುದ್ರದತ್ತ ಸಾಗುತ್ತವೆ. ಇದರಿಂದ ಈ ಪ್ರವಾಸಿ ತಾಣಕ್ಕೆ ಭೇಟಿ ನೀಡುವ ಪ್ರವಾಸಿಗರು ಮುಜುಗುರ ಪಡುವಂತಾಗಿದೆ ಎಂದು ಹೇಳಿರುವ ಪಟ್ನಾಯಕ್, ಇದನ್ನು ಪ್ರತಿಭಟಿಸಿ ತನ್ನ ವಿದ್ಯಾರ್ಥಿಗಳೊಂದಿಗೆ ಮಂಗಳವಾರದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಕಳೆದ ವರ್ಷ ಪಟ್ನಾಯಕ್‌ರನ್ನು ಕೇಂದ್ರ ಸರಕಾರದ ಸ್ವಚ್ಛ ಭಾರತ ಅಭಿಯಾನದ ರಾಯಭಾರಿ ಎಂದು ನಾಮನಿರ್ದೇಶನ ಮಾಡಲಾಗಿತ್ತು.





