ಕಲ್ಲಡ್ಕ ಶರತ್ ಮಡಿವಾಳ ಕೊಲೆ ಪ್ರಕರಣ ಎನ್‌ಐಎ ಹಸ್ತಾಂತರಿಸಲು ದೆಹಲಿಗೆ ನಿಯೋಗ-ಬಿ.ಎಸ್.ಯಡಿಯೂರಪ್ಪ

ಮಂಗಳೂರು.ಜು.13: ದಕ್ಷಿಣ ಕನ್ನಡದ ಬಂಟ್ವಾಳ ಮತ್ತು ಉಳ್ಳಾಲ ಪ್ರದೇಶದಲ್ಲಿ ಇತ್ತೀಚೆಗೆ ನಡೆದಿರುವ ಅಹಿತಕರ ಘಟನೆಗಳು ಮತ್ತು ಶರತ್ ಮಡಿವಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನವಾಗಿಲ್ಲ .ಈ ಪ್ರಕರಣದ ನೈಜ ಆರೋಪಿಗಳ ಬಂಧನವಾಗಬೇಕಾದರೆ ರಾಷ್ಟ್ರೀಯ ತನಿಖಾ ತಂಡ(ಎನ್‌ಐಎ)ಕ್ಕೆ ಪ್ರಕರಣವನ್ನು ಹಸ್ತಾಂತರಿಸಬೇಕು. ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರಕಾರದ ಮೂಲಕ ನಿಷ್ಪಕ್ಷವಾದ ತನಿಖೆ ನಡೆಯುತ್ತದೆ ಎನ್ನುವ ಬಗ್ಗೆ ನಮಗೆ ನಂಬಿಕೆ ಇಲ್ಲ ಎಂದು ರಾಜ್ಯದ ಬಿಜೆಪಿ ಅಧ್ಯಕ್ಷ ಯುಡಿಯೂರಪ್ಪ ತಿಳಿಸಿದ್ದಾರೆ.
ಅವರು ಇಂದು ನಗರದ ಪುರಭವನದಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಇಂದಿರಾ ಗಾಂಧಿಗೂ ಆರ್‌ಎಸ್‌ಎಸ್‌ನ್ನು ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ.ಈಗ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರಕಾರ ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಬಂಧನಕ್ಕೆ ಸೂಚನೆ ನೀಡುವ ಮೂಲಕ ಈ ಕೆಲಸಕ್ಕೆ ಕೈ ಹಾಕಿದೆ.ಈ ಸರಕಾರ ರಾಜ್ಯದಲ್ಲಿ ಹೆಚ್ಚು ದಿನ ಇರುವುದಿಲ್ಲ.ನಾವು ಅಧಿಕಾರಕ್ಕೆ ಹತ್ತಿರದಲ್ಲಿದ್ದೇವೆ ದುಡುಕಬಾರದು ಎಂದು ಕಾರ್ಯಕರ್ತರಿಗೆ ಯಡಿಯೂರಪ್ಪ ಕಿವಿಮಾತು ಹೇಳಿದರು.
ಕೇರಳದ ವೇಣು ಗೋಪಾಲ್‌ರಿಂದ ರಾಜ್ಯದಲ್ಲಿ ಕೊಲೆಗೆ ಕುಮ್ಮಕ್ಕು:
ರಾಜ್ಯದ ಕಾಂಗ್ರೆಸ್‌ನ ಉಸ್ತುವಾರಿ ಕೇರಳದ ಸಂಸದ ವೇಣು ಗೋಪಾಲ್ ಕೇರಳದಲ್ಲಿ ನಡೆಯುತ್ತಿರುವ ಕೊಲೆಗಳ ಮಾದರಿಯಲ್ಲಿ ರಾಜ್ಯದಲ್ಲಿ ಸಂಘಪರಿವಾರದವರ ಕೊಲೆಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪ ಮಾಡಿದರು.
ರೈ ಸವಾಲನ್ನು ಸ್ವೀಕರಿಸುತ್ತೇವೆ:- ಸಚಿವ ರಮಾನಾಥ ರೈ ಡಿ.ವಿ,ಶೋಭಾ ಕರಂದ್ಲಾಜೆ ನನ್ನ ಎದುರು ಚುನಾವಣೆಗೆ ನಿಲ್ಲಲಿ ಎನ್ನುವ ಸವಾಲೆಸೆದಿದ್ದಾರೆ. ಆ ಸವಾಲನ್ನು ಸ್ವೀಕರಿಸಿ ‘‘ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಅವರ ಎದುರು ನಿಲ್ಲಿಸಿ ನಿಮ್ಮ ಹುಟ್ಟಡಗಿಸುತ್ತೇವೆ’’ಎಂದು ಶಪಥ ಮಾಡೋಣ ಎಂದು ಯಡಿಯೂರಪ್ಪ ತಿಳಿಸಿದರು.
ಪಿಎಫ್‌ಐ ನಿಷೇಧಕ್ಕೆ ಆಗ್ರಹ:- ಜಿಲ್ಲೆಯಲ್ಲಿ ಮತ್ತು ರಾಜ್ಯದಲ್ಲಿ ಪಿಎಫ್‌ಐ ಮತ್ತು ಕೆಎಫ್‌ಡಿ ಸಂಘಟನೆಯ ಕಾರ್ಯಕರ್ತರು ಶಾಂತಿಕದಡುವ ಕೆಲಸದಲ್ಲಿ ತೊಡಗಿದ್ದಾರೆ ಆ ಸಂಘಟನೆಗಳನ್ನು ನಿಷೇಧಿಸಿ ಎಂದು ಯಡಿಯೂರಪ್ಪ ಆಗ್ರಹಿಸಿದರು.
ಬಿಜೆಪಿಯಿಂದ ಶಕ್ತಿ ಪ್ರದರ್ಶನ:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತರ ಮೇಲಿನ ಕಿರುಕುಳಕ್ಕಾಗಿ ಹಾಗೂ ನಿಷೇದಾಜ್ಞೆ ಮೂಲಕ ಪ್ರತಿಟನೆಯನ್ನು ನಿಯಂತ್ರಿಸಲು ಯತ್ನಿಸುತ್ತಿರುವ ಕಾಂಗ್ರೆಸ್ ವಿರುದ್ಧ ಒಂದು ಲಕ್ಷ ಕಾರ್ಯಕರ್ತರನ್ನು ಸೇರಿಸಿ ಬಿಜೆಪಿ ಶಕ್ತಿ ಪ್ರದರ್ಶನ ಮಾಡಲಿದೆ ಎಂದು ಯಡಿಯೂರಪ್ಪ ಘೋಷಿಸಿದರು.
ದ.ಕ ಜಿಲ್ಲೆಯಲ್ಲಿ ಅಘೋಷಿತ ಬಂದ್:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 48ದಿನಗಳಿಂದ ನಿಷೇದಾಜ್ಞೆ ಹೇರಿ ಅಘೊಷಿತ ಬಂದ್‌ನ ವಾತವರಣ ಸೃಷ್ಟಿಸಲಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ಆರೋಪಿಗಳ ಬಂಧನವಾಗಿಲ್ಲ. ರಾಜ್ಯದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸ್ವಯಂ ನಿವೃತ್ತಿ ಘೋಷಿಸಿದ ಕೆಂಪಯ್ಯರನ್ನು ಪೊಲೀಸರಿಗೆ ನಿರ್ದೇಶನ ನೀಡಲು ನೇಮಿಸಲಾಗಿದೆ.ರಾಜ್ಯದಲ್ಲಿ ರಾಷ್ಟ್ರೀಯ ತನಿಖಾ ದಳದ ಕಚೇರಿಯನ್ನು ತೆರೆಯಬೇಕು ಎಂದು ಕೇಂದ್ರಕ್ಕೆ ಆಗ್ರಹಿಸುತ್ತೇವೆ. ರುದ್ರೇಶ್ ಕೊಲೆ ಪ್ರಕರಣದಲ್ಲಿ ಎನ್‌ಐಎ ತನಿಖೆ ನಡೆದು ಪಿಎಫ್‌ಐ ಸಂಘಟನೆಯ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಘಟನೆಯನ್ನು ನಿಷೇಧಿಸಬೇಕು. ರಾಜ್ಯದ 23 ಪ್ರಕರಣಗಳನ್ನು ಎನ್‌ಐಎ ಗೆ ವಹಿಸಿಕೊಡಬೇಕು ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು.
ಜಿಲ್ಲೆಯಲ್ಲಿ ನಡೆದ ಶರತ್ ಕೊಲೆ ಪ್ರಕರಣವನ್ನು ಎನ್‌ಐಎ ಮೂಲಕ ತನಿಖೆ ಮಾಡಿಯೇ ಸಿದ್ಧ:- ಜಿಲ್ಲೆಯಲ್ಲಿ ನಡೆದ ಶರತ್ ಕೊಲೆ ಪ್ರಕರಣದ ಆರೋಪಿಗಳ ಬಂಧನವಾಗಿಲ್ಲ ಈ ಬಗ್ಗೆ ಎನ್‌ಐಎ ತನಿಖೆ ಮಾಡಿಸುತ್ತೇವೆ.ಸಂಘ ಪರಿವಾರದ ಕಾರ್ಯಕರ್ತರ ಮೇಲೆ 307 ಸೆ.ಪ್ರಕಾರ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಇದರಿಂದ ಸಿದ್ದರಾಮಯ್ಯ ಹಿಂಬಾಗಿಲಿನ ಮೂಲಕ ಜಿಲ್ಲೆಯಲ್ಲಿ ತುರ್ತಪರಿಸ್ಥಿತಿ ಹೇರಲು ಪ್ರಯತ್ನಿಸುತ್ತಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಸಭೆಯಲ್ಲಿ ಶಾಸಕ ಅಂಗಾರ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪುಜಾರಿ, ಗಣೇಶ್ ಕಾರ್ನಿಕ್, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಟಂದೂರು, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೊಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ , ಮಹಿಳಾ ಮೋರ್ಚಾದ ಅಧ್ಯಕ್ಷೆ ಪೂಜಾ ಪೈ,ರಾಜ್ಯ ವಕ್ತಾರೆ ಸುಲೋಚನಾ ಜಿ.ಭಟ್ ಮೊದಲಾದವರು ಉಪಸ್ಥಿತರಿದ್ದರು.







