ಉತ್ತರಪ್ರದೇಶ: ಕೆಲಸದ ವೇಳೆ ಹೆಲ್ಮೆಟ್ ಧರಿಸುವ ಸರಕಾರಿ ಸಿಬಂದಿ

ಪಾಟ್ನಾ, ಜು. 13: ಕಟ್ಟಡ ಕುಸಿಯುವ ಭೀತಿ ಇರುವ ಹಿನ್ನೆಲೆಯಲ್ಲಿ ಪೂರ್ವ ಚಂಪಾರಣ್ ಜಿಲ್ಲೆಯ ಬಿಹಾರ ಸರಕಾರಿ ಕಚೇರಿಗಳಲ್ಲಿ ಸಿಬಂದಿ ಹೆಲ್ಮೆಟ್ ಧರಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅರೇರಾಜ್‌ನಲ್ಲಿರುವ ಬ್ಲಾಕ್ ಕಚೇರಿಯ ಕಟ್ಟಡದಲ್ಲಿ ಸಿಬಂದಿ ಮಾತ್ರ ಹೆಲ್ಮೆಟ್ ಹಾಕಿ ಕೆಲಸ ನಿರ್ವಹಿಸುತ್ತಿರುವುದಲ್ಲದೆ, ಇಲ್ಲಿಗೆ ಭೇಟಿ ನೀಡುವ ಇತರರು ಕೂಡ ಹೆಲ್ಮೆಟ್ ಧರಿಸಿಯೇ ಆಗಮಿಸುತ್ತಿದ್ದಾರೆ.
ಟ್ಯಾರೇಸ್‌ನ ಭಾಗ ಬಿದ್ದು ಹಲವರು ಗಾಯಗೊಂಡಿದ್ದಾರೆ. ಆದುದರಿಂದ ನಾವೆಲ್ಲರೂ ಹೆಲ್ಮೆಟ್ ಹಾಕಿಯೇ ಕೆಲಸ ಮಾಡುತ್ತೇವೆ ಎಂದು ಭೂದಾಖಲೆ ವಿಭಾಗ ನಿರ್ವಹಿಸುತ್ತಿರುವ ಲಾಲನ್ ಹಾಗೂ ಪರ್ವೇಜ್ ಅಹ್ಮದ್ ತಿಳಿಸಿದ್ದಾರೆ.
ಇದು ತುಂಬಾ ಹಳೆಯ ಕಟ್ಟಡ. ಗೋಡೆ ಹಾಗೂ ಮಾಡು ಬೀಳುವ ಸ್ಥಿತಿಯಲ್ಲಿದೆ. ಮಳೆಗಾಲದಲ್ಲಿ ನೀರು ತೊಟ್ಟಿಕ್ಕುತ್ತಿರುತ್ತದೆ. ಮಾಡು ಯಾವಾಗ ಬೇಕಾದರೂ ಕುಸಿಯಬಹುದು. ಆದರೂ ನಾವು ಕರ್ತವ್ಯಕ್ಕೆ ಗೈರು ಹಾಜರಾಗುತ್ತಿಲ್ಲ. ಆದುದರಿಂದ ಹೆಲ್ಮೆಟ್ ಧರಿಸಿ ಕರ್ತವ್ಯ ನಿರ್ವಹಿಸಲು ನಾವೆಲ್ಲರೂ ನಿರ್ಧರಿಸದೆವು ಎಂದು ಅವರು ಹೇಳಿದ್ದಾರೆ.
ಈ ಕಟ್ಟಡ ಅಪಾಯದ ಸ್ಥಿತಿಯಲ್ಲಿದೆ ಎಂದು ಬಿಹಾರ್ ಸರಕಾರದ ಕಟ್ಟಡ ನಿರ್ಮಾಣ ವಿಭಾಗ ಕಳೆದ ವರ್ಷ ಹೇಳಿತ್ತು. ಇದರ ಹೊರತಾಗಿಯೂ ಸರಕಾರ ಕಚೇರಿಯನ್ನು ಇಲ್ಲಿಂದ ವರ್ಗಾಯಿಸಿಲ್ಲ.







