ಶಾಸಕರಿಗೆ ಮಣೆ: ಜಿಲ್ಲಾ ಪಂಚಾಯತ್ ಸದಸ್ಯರ ಕಡೆಗಣನೆ?
ನಿರಂತರ ಮೊಟಕುಗೊಳ್ಳುತ್ತಿದೆ ಅಧಿಕಾರ: ಜಿಪಂ ಸದಸ್ಯರ ಆರೋಪ
ಶಿವಮೊಗ್ಗ, ಜು.13: ಪಂಚಾಯತ್‌ರಾಜ್ ವ್ಯವಸ್ಥೆಯ ಅಧಿಕಾರ ವಿಕೇಂದ್ರಿಕರಣ ನೀತಿಯಡಿ ಅಸ್ತಿತ್ವಕ್ಕೆ ಬಂದ ಜಿಪಂ, ತಾಪಂ ಹಾಗೂ ಗ್ರಾಪಂಗಳು ಆಡಳಿತ ವ್ಯವಸ್ಥೆಯಲ್ಲಿ ತಮ್ಮದೇಆದ ಮಹತ್ವ ಹೊಂದಿವೆ. ಆದರೆ ಬದಲಾದ ಸನ್ನಿವೇಶದಲ್ಲಿ ವಿವಿಧ ಕಾರಣಗಳಿಂದ ಜಿಪಂ ಆಡಳಿತ ತನ್ನ ಮಹತ್ವ ಉಳಿಸಿಕೊಳ್ಳಲು ಹೆಣಗಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ.
ವರ್ಷದಿಂದ ವರ್ಷಕ್ಕೆ ಜಿಪಂ ಆಡಳಿತಕ್ಕೆ ಸರಕಾರದ ವಿವಿಧ ಯೋಜನೆಗಳಡಿ ಬಿಡುಗಡೆಯಾಗುತ್ತಿದ್ದ ಅನುದಾನ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಶಾಸಕರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ಮೂಲಕ ಜಿಪಂ ಸದಸ್ಯರ ಅಧಿಕಾರ ಕಸಿದುಕೊಳ್ಳುವ ಯತ್ನ ನಡೆಸಲಾಗುತ್ತಿದೆ. ಇದು ಪಂಚಾಯತ್ ರಾಜ್ ವ್ಯವಸ್ಥೆಯ ಆಶಯಕ್ಕೆ ಕೊಡಲಿ ಪೆಟ್ಟು ನೀಡುವಂತದ್ದಾಗಿದೆ ಎಂದು ಬಹುತೇಕ ಜಿಪಂ ಸದಸ್ಯರು ಅಸಮಾಧಾನ ವ್ಯಕ್ತಪಡಿಸಲು ಆರಂಭಿಸಿದ್ದಾರೆ.
ಕಳೆದ ವರ್ಷ ಪಂಚಾಯತ್‌ರಾಜ್ ಕಾಯ್ದೆಗೆ ರಾಜ್ಯ ಸರಕಾರ ತಿದ್ದುಪಡಿ ತಂದು ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿಯ ಅಧಿಕಾರಾವಧಿಯನ್ನು ಐದು ವರ್ಷಗಳಿಗೆ ನಿಗದಿಪಡಿಸಿತು. ಜೊತೆಗೆ ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಕಲ್ಪಿಸಿತು. ಹಾಗೆಯೇ ಸದಸ್ಯರ ಮಾಸಿಕ ಗೌರವಧನ ಹೆಚ್ಚಳ ಮಾಡಿತು. ಸರಕಾರದ ಈ ಕ್ರಮ ನಿಜಕ್ಕೂ ಸ್ವಾಗತಾರ್ಹವಾದುದಾಗಿದೆ.
ಆದರೆ ಇನ್ನೊಂದೆಡೆ ವಿವಿಧ ಯೋಜನೆಗಳ ಅನುಷ್ಠಾನದ ಜವಾಬ್ದಾರಿಯನ್ನು ಶಾಸಕರಿಗೆ ವಹಿಸುತ್ತಿದೆ. ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ ಫಲಾನುಭವಿಗಳ ಆಯ್ಕೆ ನಡೆಸಲಾಗುತ್ತಿದೆ.
ಜಿಪಂ ಸದಸ್ಯರು ನಿರ್ವಹಣೆ ಮಾಡುತ್ತಿದ್ದ ಕೆಲಸ ಗಳನ್ನು ಶಾಸಕರಿಗೆ ವಹಿಸಲಾಗುತ್ತಿದೆ. ಹಾಗಾದರೆ ಜಿಪಂ ಸದಸ್ಯರು ಏನು ಮಾಡಬೇಕು ಎಂದು ಸದಸ್ಯರು ಪ್ರಶ್ನಿಸುತ್ತಾರೆ. ಕುಡಿಯುವ ನೀರು ಯೋಜನೆ, 13ನೆ ಹಣಕಾಸು ಅನುದಾನ, ವಸತಿ ಯೋಜನೆ, ಹೈನುಗಾರಿಕೆ ಫಲಾನುಭವಿಗಳ ಆಯ್ಕೆ ಸೇರಿದಂತೆ ಜಿಪಂ ಆಡಳಿತ ನಿರ್ಧಾರ ಕೈಗೊಳ್ಳಬೇಕಾದ ಹಲವು ಮಹತ್ವದ ಕಾರ್ಯಕ್ರಮಗಳ ಅನುಷ್ಠಾನದ ಜವಾಬ್ದಾರಿಯನ್ನು ಶಾಸಕರ ನೇತೃತ್ವದ ಸಮಿತಿಗೆ ವಹಿಸಲಾಗಿದೆ. ಇದರಿಂದ ಜಿಪಂ ಸದಸ್ಯರ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಹಾಗೆಯೇ ಜಿಪಂಗೆ ಬಿಡುಗಡೆಯಾಗುವ ವಾರ್ಷಿಕ ಅನುದಾನವೂ ಕಡಿಮೆಯಾಗುತ್ತಿದೆ. ಮತ ನೀಡಿ ಆಯ್ಕೆ ಮಾಡಿ ಕಳುಹಿಸಿದ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಸಾಧ್ಯವಾಗದಂತಾಗಿದೆ. ಒಂದೆಡೆ ಅಧಿಕಾರ ಕೊಟ್ಟಂತೆ ಮಾಡಿ, ಇನ್ನೊಂದೆಡೆ ಅಧಿಕಾರ ಕಿತ್ತುಕೊಳ್ಳುವ ಕೆಲಸ ಮಾಡಲಾಗುತ್ತಿದೆ. ಇದರಿಂದ ಜಿಪಂ ವ್ಯವಸ್ಥೆಯ ಮೇಲೆ ನಾಗರಿಕರು ವಿಶ್ವಾಸ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ವಾಗುತ್ತಿದೆ ಎಂದು ಸದಸ್ಯರು ಅಳಲು ತೋಡಿಕೊಂಡಿದ್ದಾರೆ.
ಸರಕಾರ ಜಿಪಂ ಆಡಳಿತದ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕು. ಅಧಿಕಾರ ಮೊಟಕುಗೊಳಿಸುವ ಕೆಲಸ ಮಾಡಬಾರದು. ಈ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಮತ್ತಷ್ಟು ಸಶಕ್ತಗೊಳಿಸಲು ಮುಂದಾಗಬೇಕು ಎನ್ನುವುದು ಜಿಪಂ ಸದಸ್ಯರ ಆಗ್ರಹವಾಗಿದೆ.
ಸುತ್ತೋಲೆಯಿಂದ ಅಧಿಕಾರ ಮೊಟಕು: ಸುರೇಶ್ ಸ್ವಾಮಿರಾವ್
ಪಂಚಾಯತ್‌ರಾಜ್ ಕಾಯ್ದೆಯಡಿ ಜಿಪಂಗೆ ಇರುವ ಅಧಿಕಾರವನ್ನು ಇಲಾಖೆಗಳ ಆಯುಕ್ತರು ಸುತ್ತೋಲೆಗಳ ಮೂಲಕ ಮೊಟಕುಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಜಿಪಂ ಸದಸ್ಯ ಸುರೇಶ್ ಸ್ವಾಮಿರಾವ್ ಆರೋಪಿಸಿದ್ದಾರೆ.
ಜಿಪಂ ಆಡಳಿತ ವ್ಯಾಪ್ತಿಗೆ 32 ಇಲಾಖೆಗಳು ಬರುತ್ತವೆ. ಆದರೆ ಇಲಾಖೆಯ ಹಲವು ಕಾರ್ಯಕ್ರಮಗಳ ಅನುಷ್ಠಾನ ಶಾಸಕರ ಅಣತಿಯಂತೆ ನಡೆಯುತ್ತಿವೆ. ನಮ್ಮ ಮಾತು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದರು.
ಪಂಚಾಯತ್‌ರಾಜ್ ಇಲಾಖೆಯಡಿ ಬರುವ ಪಿಡಿಒಗಳು ನಮ್ಮ ಮಾತು ಕೇಳದಂತಹ ಸ್ಥಿತಿಯಿದೆ ಎಂದು ಎಂದು ಜಿಪಂ ಸದಸ್ಯ ಸುರೇಶ್ ಸ್ವಾಮಿರಾವ್ ತಿಳಿಸಿದ್ದಾರೆ.
ಹಲವು ಯೋಜನೆಗಳ ಫಲಾನುಭವಿಗಳ ಆಯ್ಕೆ ಜವಾಬ್ದಾರಿಯನ್ನು ಶಾಸಕರ ನೇತೃತ್ವದ ಸಮಿತಿಗೆ ನೀಡಲಾಗುತ್ತಿದೆ. ಜಿಪಂ ಸದಸ್ಯರಿಗೆ ನೆಪಮಾತ್ರಕ್ಕೆ ಕೆಲ ಅವಕಾಶ ಕಲ್ಪಿಸಿ, ಲಾಟರಿ ಮೂಲಕ ಫಲಾನುಭವಿಗಳ ಆಯ್ಕೆ ಮಾಡುವಂತೆ ನಿರ್ದೇಶನ ನೀಡಲಾಗುತ್ತಿದೆ. ಇದರಿಂದ ಜಿಪಂ ಸದಸ್ಯರು ತಮ್ಮ ಕ್ಷೇತ್ರ ವ್ಯಾಪ್ತಿಯ ಅರ್ಹ ನಾಗರಿಕರಿಗೂ ಸರಕಾರದ ಸೌಲಭ್ಯ ತಲುಪಿಸಲು ಸಾಧ್ಯವಾಗದಂತಾಗಿದೆ.ಸೌಮ್ಯಾ ಬೋಜ್ಯನಾಯ್ಕಾ,
ಜಿಪಂ ಸದಸ್ಯೆ







