ರೋಜರ್‌ಫೆಡರರ್ ಸೆಮಿ ಫೈನಲ್‌ಗೆ

ಲಂಡನ್, ಜು.13: ಸ್ವಿಸ್‌ನ ಹಿರಿಯ ಆಟಗಾರ ರೋಜರ್ ಫೆಡರರ್ ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸೆಮಿ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಇಲ್ಲಿನ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ಬುಧವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಏಳು ಬಾರಿಯ ಚಾಂಪಿಯನ್ ಫೆಡರರ್ ಕೆನಡಾದ ಮಿಲೊಸ್ ರಾವೊನಿಕ್‌ರನ್ನು 6-4, 6-2, 7-6(7/4) ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ 12ನೆ ಬಾರಿ ವಿಂಬಲ್ಡನ್ ಟೂರ್ನಿಯಲ್ಲಿ ಸೆಮಿ ಫೈನಲ್ ತಲುಪಿದ್ದಾರೆ.
35ರ ಹರೆಯದ ಫೆಡರರ್ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ 100ನೆ ಪಂದ್ಯವಾಡಿದರು. ಅವರು ಸೆಮಿಫೈನಲ್‌ನಲ್ಲಿ 2010ರ ವಿಂಬಲ್ಡನ್‌ನ ರನ್ನರ್-ಅಪ್ ಥಾಮಸ್ ಬೆರ್ಡಿಕ್‌ರನ್ನು ಎದುರಿಸಲಿದ್ದಾರೆ.
ಮೂರು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ ಬುಧವಾರ ನಡೆದ ಕ್ವಾ.ಫೈನಲ್‌ನಲ್ಲಿ 7-6(7/2), 2-0 ಹಿನ್ನಡೆಯಲ್ಲಿದ್ದಾಗ ಮೊಣಕೈ ನೋವು ಕಾಣಿಸಿಕೊಂಡು ಗಾಯಗೊಂಡು ಪಂದ್ಯದಿಂದ ನಿವೃತ್ತಿಯಾದರು. ಈ ಹಿನ್ನೆಲೆಯಲ್ಲಿ ಬೆರ್ಡಿಕ್ ಅಂತಿಮ ನಾಲ್ಕರ ಘಟ್ಟ ತಲುಪಿದ್ದಾರೆ.
ಫೆಡರರ್ ವಿಂಬಲ್ಡನ್‌ನಲ್ಲಿ ಸೆಮಿ ಫೈನಲ್‌ಗೆ ತಲುಪಿರುವ ಎರಡನೆ ಹಿರಿಯ ಆಟಗಾರನಾಗಿದ್ದಾರೆ. 1974ರಲ್ಲಿ ಕೆನ್ ರಾಸ್‌ವೆಲ್ ತನ್ನ 39ನೆ ವಯಸ್ಸಿನಲ್ಲಿ ಸೆಮಿಫೈನಲ್‌ಗೆ ತಲುಪಿದ್ದರು. ‘‘ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ 100 ಪಂದ್ಯಗಳನ್ನು ಆಡಿದ್ದೇನೆಂದು ನಂಬಲು ಸಾಧ್ಯವಾಗುತ್ತಿಲ್ಲ. ಇಷ್ಟೊಂದು ವರ್ಷಗಳ ಕಾಲ ನನಗೆ ಆಡಲು ಸಾಧ್ಯವಾಗಿರುವುದಕ್ಕೆ ಸಂತೋಷವಾಗುತ್ತಿದೆ’’ ಎಂದು ಫೆಡರರ್ ಪ್ರತಿಕ್ರಿಯಿಸಿದ್ದಾರೆ.
ಪ್ರಶಸ್ತಿ ಗೆಲ್ಲುವ ವಿಶ್ವಾಸ ಮೂಡಿಸಿದ್ದ ಆ್ಯಂಡಿ ಮರ್ರೆ, ನೊವಾಕ್ ಜೊಕೊವಿಕ್ ಹಾಗೂ ರಫೆಲ್ ನಡಾಲ್ ಈಗಾಗಲೇ ಟೂರ್ನಿಯಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಫೆಡರರ್ ಈ ವರ್ಷ ವಿಂಬಲ್ಡನ್ ಪ್ರಶಸ್ತಿ ಗೆಲ್ಲುವ ಫೇವರಿಟ್ ಆಟಗಾರನಾಗಿದ್ದಾರೆ.
ಕಳೆದ ವರ್ಷ ವಿಂಬಲ್ಡನ್ ಸೆಮಿ ಫೈನಲ್‌ನಲ್ಲಿ ಕೆನಡಾದ ರಾವೊನಿಕ್ ವಿರುದ್ಧವೇ ಸೋತಿದ್ದ ಫೆಡರರ್ 2016ರಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ವರ್ಷದ ಜನವರಿಯಲ್ಲಿ ಸಕ್ರಿಯ ಟೆನಿಸ್‌ಗೆ ವಾಪಸಾಗಿದ್ದ ಫೆಡರರ್ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದರು. ಅದು ಫೆಡರರ್ ಜಯಿಸಿದ್ದ 18ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯಾಗಿತ್ತು.
ಇದೀಗ ಸೆಮಿ ಫೈನಲ್‌ಗೆ ತಲುಪಿರುವ ಫೆಡರರ್ 8ನೆ ವಿಂಬಲ್ಡನ್ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಲು ಇನ್ನು ಎರಡು ಪಂದ್ಯಗಳಲ್ಲಿ ಜಯ ಸಾಧಿಸಬೇಕಾಗಿದೆ.







