ಉ.ಪ್ರ.: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮುಸ್ಲಿಂ ಕುಟುಂಬದ ಮೇಲೆ ದಾಳಿ ನಡೆಸಿದ ದುಷ್ಕರ್ಮಿಗಳು
ಮಹಿಳೆಯರು, ಮಕ್ಕಳಿಗೆ ಸರಳುಗಳಿಂದ ಹಲ್ಲೆಗೈದು, ನಗ-ನಗದು ದರೋಡೆ

ಮೈನಪುರಿ,ಜು.14: ಉತ್ತರ ಪ್ರದೇಶದ ಮೈನಪುರಿ ಜಿಲ್ಲೆಯಲ್ಲಿ ಬುಧವಾರ ಸಂಜೆ ಚಲಿಸುತ್ತಿದ್ದ ರೈಲಿನಲ್ಲಿ ಮಹಿಳೆಯರು, ಮಕ್ಕಳು, ಹಿರಿಯರು ಮತ್ತು ಓರ್ವ ಅಂಗವಿಕಲ ಹದಿಹರೆಯದ ಬಾಲಕ ಸೇರಿದಂತೆ 10 ಜನರಿದ್ದ ಮುಸ್ಲಿಂ ಕುಟುಂಬದ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಸುಮಾರು 30-35 ಜನರ ಗುಂಪು ಅವರನ್ನು ದೋಚಿ ಪರಾರಿಯಾಗಿದೆ.
ನತದೃಷ್ಟ ಕುಟುಂಬವು ಮದುವೆಯೊಂದರಲ್ಲಿ ಭಾಗವಹಿಸಿ ಶಿಕೋಹಾಬಾದ್- ಕಾಸಗಂಜ್ ಪ್ಯಾಸೆಂಜರ್ ರೈಲಿನಲ್ಲಿ ತಮ್ಮೂರಿಗೆ ಮರಳುತ್ತಿದ್ದಾಗ ಈ ಎದೆ ನಡುಗಿಸುವ ಘಟನೆ ನಡೆದಿದೆ. ಫರೂಕಾಬಾದ್ ಜಂಕ್ಷನ್‌ನಿಂದ ಸುಮಾರು 30 ಕಿ.ಮೀ.ಅಂತರದಲ್ಲಿ ಮೋಟಾ ಮತ್ತು ನಿಬ್‌ಕರೋರಿ ರೈಲ್ವೆ ನಿಲ್ದಾಣಗಳ ನಡುವೆ ಸುಮಾರು 30-35 ಜನರಿದ್ದ ಗುಂಪು ಅವರನ್ನು ಕಬ್ಬಿಣದ ಸರಳುಗಳು ಮತ್ತು ದೊಣ್ಣೆಗಳಿಂದ ಥಳಿಸಿದೆ.
ಗುಂಪೊಂದು ಕುಟುಂಬವಿದ್ದ ಬೋಗಿಯನ್ನು ಬಡಿಯುತ್ತಿರುವ ಮತ್ತು ಕಿಟಕಿಗಳ ಗಾಜು ಒಡೆಯಲು ಕಲ್ಲುತೂರಾಟ ನಡೆಸುತ್ತಿರುವ ದೃಶ್ಯಗಳಿರುವ ವೀಡಿಯೋ ಬಹಿರಂಗಗೊಂಡಿದೆ. ಪುಂಡರು ತುರ್ತು ನಿಗಮನ ಕಿಟಕಿಯ ಗಾಜನ್ನು ಒಡೆದು ಒಳನುಗ್ಗುತ್ತಿರುವದೂ ವೀಡಿಯೊದಲ್ಲಿ ಕಂಡುಬಂದಿದೆ.
‘‘ಅದೊಂದು ಮರೆಯಲಾಗದ ಭಯಾನಕ ಘಟನೆ. ಅವರು ನಮ್ಮನ್ನು ಕಬ್ಬಿಣದ ಸರಳುಗಳಿಂದ ಥಳಿಸಿದರು. ನಮ್ಮ ಸೊತ್ತುಗಳನ್ನು ದೋಚಿದರು. ನಮ್ಮ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದರು. ಅವರು ದೈಹಿಕ ಮತ್ತು ಮನೋವಿಕಲನಾಗಿರುವ ನನ್ನ 17ರ ಹರೆಯದ ಮಗನನ್ನೂ ಬಿಡಲಿಲ್ಲ ’’ ಎಂದು ತಲೆಗೆ ತೀವ್ರವಾಗಿ ಗಾಯಗೊಂಡಿರುವ, ಬಲಗೈ ಮೂಳೆ ಮುರಿದಿರುವ ಮುಹಮ್ಮದ್ ಶಾಕಿರ್(50)ತಿಳಿಸಿದರು.
ಅವರು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಗುಂಪಿನಲ್ಲಿದ್ದ ಕೆಲವರು ‘ಅವರು ಮುಸ್ಲಿಮರು,ಅವರನ್ನು ಕೊಲ್ಲಿ ’ಎಂದು ಕೂಗುತ್ತಿದ್ದರು. ನಾವು ಪ್ರಜ್ಞೆ ಕಳೆದುಕೊಳ್ಳುವವರೆಗೂ ಅವರು ನಮ್ಮನ್ನು ಥಳಿಸಿದರು ಎಂದು ಶಾಕಿರ್ ಹೇಳಿದರು.
‘‘ ದಾಳಿಕೋರರು ನನ್ನ ತಾಯಿ ಮತ್ತು ಸಹೋದರಿಯ ಮೈಮೇಲೆ ಕೈ ಹಾಕಿ ಅವರ ಬಟ್ಟೆಗಳನ್ನು ಹರಿದಿದ್ದರು. ಅವರ ಚಿನ್ನದ ಸರಗಳನ್ನು ಕಿತ್ತುಕೊಂಡಿದ್ದಾರೆ. ನಮ್ಮ ಲಗ್ಗೇಜ್‌ಗಳು,ಚಿನ್ನಾಭರಣಗಳನ್ನು ದೋಚಿದ್ದಾರೆ. ನಮ್ಮ ರಕ್ಷಣೆಗೆ ಧಾವಿಸಿದ್ದ ಇತರ ಪ್ರಯಾಣಿಕರ ಮೇಲೂ ಅವರು ಹಲ್ಲೆ ನಡೆಸಿದ್ದರು. ಹೀಗಾಗಿ ಅವರೆಲ್ಲ ಹೆದರಿ ಬೇರೆ ಬೋಗಿಗೆ ಹೊರಟುಹೋಗಿದ್ದರು ’’ ಎಂದು ಶಾಕಿರ್‌ರ ಪುತ್ರ ಅರ್ಸಾನ್(22) ಹೇಳಿದರು.
‘‘ರೈಲು ನಿಂತ ತಕ್ಷಣ ದಾಳಿಕೋರರು ಹೊರಕ್ಕೆ ಹಾರಿದ್ದು, ಅಲ್ಲಿ ಅವರಿಗಾಗಿ ಸುಮಾರು 20-25 ಯುವಕರು ತಮ್ಮ ಬೈಕ್‌ಗಳೊಂದಿಗೆ ಕಾದುನಿಂತಿದ್ದರು. ನಾವು ಬೋಗಿಯ ಬಾಗಿಲನ್ನು ಒಳಗಿನಿಂದ ಭದ್ರಗೊಳಿಸಿದ್ದರೂ ತುರ್ತು ನಿರ್ಗಮನ ಕಿಟಕಿಯ ಗಾಜನ್ನು ಒಡೆದು ಒಳನುಗ್ಗಿದ ಅವರೆಲ್ಲ ಮತ್ತೆ ನಮ್ಮನ್ನು ಥಳಿಸಿದರು ’’ಎಂದರು.
ಘಟನೆಯ ಬಳಿಕ ಶಾಕಿರ್ ಕುಟುಂಬವು ಪೊಲೀಸರಿಗೆ ಕರೆಗಳನ್ನು ಮಾಡಿದ್ದರೂ ಸಂಪರ್ಕ ಸಾಧ್ಯವಾಗಿರಲಿಲ್ಲ. ರೈಲು ಫಾರೂಕಾಬಾದ್ ನಿಲ್ದಾಣ ತಲುಪಿದಾಗ ರೈಲ್ವೆ ಪೊಲೀಸರು ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನವರ ಕೈಕಾಲುಗಳು ಮುರಿದಿವೆ. ತಲೆ ಮತ್ತು ಹೊಟ್ಟೆಗೆ ಗಂಭೀರ ಗಾಯಗಳಾಗಿವೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ವೀಡಿಯೊದ ಆಧಾರದಲ್ಲಿ ಮೂವರು ಯುವಕರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.







