ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನಕ್ಕೆ ಚಾಲನೆ
‘ಕನ್ನಡ ಕಲಿ- ಕನ್ನಡ ನುಡಿ’ ಬಿಡುಗಡೆ
ಬೆಂಗಳೂರು,ಜು.14: ಅಂಚೆ ಚೀಟಿ ಮಹತ್ವ ಕುರಿತು ಇಂದಿನ ಯುವಪೀಳಿಗೆಗೆ ಅರಿವು ಮೂಡಿಸಲು ಕರ್ನಾಟಕ ಫಿಲಾಟೆಲಿಕ್ ಸೊಸೈಟಿ ವತಿಯಿಂದ ಇಂದಿನಿಂದ ಮೂರು ದಿನಗಳ ಕಾಲ ನಗರದಲ್ಲಿ ಹಮ್ಮಿಕೊಂಡಿರುವ ‘ಕರ್‌ಫಿಲೆಕ್ಸ್ -2017’ ರಾಜ್ಯಮಟ್ಟದ ಅಂಚೆ ಚೀಟಿ ಪ್ರದರ್ಶನಕ್ಕೆ ಕರ್ನಾಟಕ ವೃತ್ತದ ಚೀಫ್ ಪೋಸ್ಟ್‌ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೊ ವಿದ್ಯುಕ್ತವಾಗಿ ಚಾಲನೆ ನೀಡಿದರು.
ನಗರದ ಶ್ರೀರಾಜರಾಜೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಅಂಚೆ ಚೀಟಿ ಪ್ರದರ್ಶನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಅಂಚೆ ಚೀಟಿ ಸಂಗ್ರಾಹಕಿ ಡಾ. ಸೀತಾ ಭತೇಜ ಅವರು ‘ಕನ್ನಡ ಕಲಿ- ಕನ್ನಡ ನುಡಿ’ ಹಾಗೂ ಕ್ರೀಡಾಪಟುಗಳಾದ ಅನಿಲ್ ಕುಂಬ್ಳೆ, ಪ್ರಕಾಶ್ ಪಡುಕೋಣೆ, ಪಂಕಜ್ ಅಡ್ವಾನಿ ಅವರ ಅಂಚೆ ಚೀಟಿಗಳನ್ನು ಲೋಕಾರ್ಪಣೆಗೊಳಿಸಿದರು. ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರಲ್ಲಿ ಅಂಚೆ ಚೀಟಿ ಮಹತ್ವ ಮತ್ತು ಸಂಗ್ರಹ ಹವ್ಯಾಸ ಉತ್ತೇಜಿಸುವ ಸಲುವಾಗಿ ಏರ್ಪಡಿಸಿರುವ ಅಂಚೆ ಚೀಟಿ ಪ್ರದರ್ಶನದಲ್ಲಿ ಸಾವಿರಾರು ಬಗೆಯ ಅಂಚೆಚೀಟಿಗಳು ಆಕರ್ಷಣೀಯವಾಗಿವೆ.
ಪ್ರದರ್ಶನದಲ್ಲಿ ಡಾ. ಚಾರ್ಲ್ಸ್ ಲೋಬೊ ಸಂಗ್ರಹಿಸಿರುವ ಗೋವಾದ ಇತಿಹಾಸ ಕುರಿತ ಅಂಚೆ ಚೀಟಿ, ಡಾ. ಸೀತಾ ಭತೇಜ ಸಂಗ್ರಹಿಸಿರುವ ಬ್ರಿಟಿಷ್ ಇಂಡಿಯಾ ಹಾಗೂ ಕೆ. ಚೈತನ್ಯದೇವ್ ಸಂಗ್ರಹದ ಫ್ರೆಂಚ್ ಇಂಡಿಯಾ ಕುರಿತು ಅಂಚೆ ಚೀಟಿಗಳು, ಪೋರ್ಚುಗೀಸ್ ಇಂಡಿಯಾ, ಒಲಿಂಪಿಯಾಡ್, ಕ್ರೀಡೆ, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ವಿಶ್ವದ ಎಲ್ಲ ದೇಶಗಳ ಅಂಚೆ ಚೀಟಿಗಳನ್ನು ನೋಡಬಹುದು.
ಅಂಚೆ ಪ್ರದರ್ಶನದ ಜತೆಗೆ ಶಾಲಾ ವಿದ್ಯಾರ್ಥಿಗಳಿಗೆಂದು ಅಂಚೆ ಚೀಟಿಗಳಿಗೆ ಸಂಬಂಧಿಸಿದಂತೆ ರಸಪ್ರಶ್ನೆ, ಪತ್ತೆ ಹಚ್ಚುವ ಸ್ಪರ್ಧೆ ಸೇರಿದಂತೆ ನಾನಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರದರ್ಶನದಲ್ಲಿ 103 ಮಂದಿ ಅಂಚೆ ಚೀಟಿ ಸಂಗ್ರಹಕಾರರಿಂದ ಅಂಚೆ ಚೀಟಿಗಳ ಸಂಗ್ರಹಗಳು, ಲಕೋಟೆಗಳು ಪ್ರದರ್ಶನಗೊಂಡಿವೆ. ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಏಳು ಮಂದಿ ಸಂಗ್ರಹಕಾರರ ಅಂಚೆ ಚೀಟಿಗಳ ಸಂಗ್ರಹದಲ್ಲಿವೆ. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಕೆ. ಚೈತನ್ಯದೇವ್, ಪ್ರಧಾನ ಕಾರ್ಯದರ್ಶಿ ನಿಖಿಲೇಶ್ ಮೇಲ್ಕೋಟೆ, ನಾನಾ ಭಾಗಗಳಿಂದ ಆಗಮಿಸಿದ್ದ ಅಂಚೆ ಚೀಟಿ ಸಂಗ್ರಹಕಾರರು ಸೇರಿದಂತೆ ಇತರರು ಉಪಸ್ಥಿತರಿದ್ದರು.







