ಸಾಮಾಜಿಕ ತಾಣಗಳಲ್ಲಿ ನೊಬೆಲ್ ವಿಜೇತನ ಶ್ರದ್ಧಾಂಜಲಿ ಹತ್ತಿಕ್ಕಿದ ಚೀನಾ

ಬೀಜಿಂಗ್, ಜು. 14: ಗುರುವಾರ ಬಂಧನದಲ್ಲೇ ಮೃತಪಟ್ಟ ಚೀನಾದ ಪ್ರಜಾಪ್ರಭುತ್ವ ಹೋರಾಟಗಾರ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಸಾಹಿತಿ ಲಿಯು ಕ್ಸಿಯಾವೊಬೊ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುವುದನ್ನು ತಪ್ಪಿಸಲು ಚೀನಾ ಹಲವಾರು ದಮನಕಾರಿ ಕ್ರಮಗಳನ್ನು ತೆಗೆದುಕೊಂಡಿದೆ.
ಅದರ ಭಾಗವಾಗಿ, ಸಾಮಾಜಿಕ ಜಾಲ ತಾಣಗಳಲ್ಲಿ ಅವರ ಪರವಾಗಿ ಕ್ಯಾಂಡಲ್‌ಗಳನ್ನು ಹೊತ್ತಿಸುವುದು, ಸಂತಾಪ ಸೂಚಕ ಸಂದೇಶಗಳನ್ನು (ರಿಪ್) ರವಾನಿಸುವುದು ಹಾಗೂ ಇತರ ರೀತಿಗಳಲ್ಲಿ ಶ್ರದ್ಧಾಂಜಲಿ ಸಲ್ಲಿಸುವುದನ್ನು ನಿಷೇಧಿಸಿದೆ.
ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 61 ವರ್ಷದ ಪ್ರಜಾಪ್ರಭುತ್ವ ಹೋರಾಟಗಾರ ಗುರುವಾರ ಶೆನ್ಯಾಂಗ್ ನಗರದ ಆಸ್ಪತ್ರೆಯೊಂದರಲ್ಲಿ ಮೃತಪಟ್ಟರು.
ಆದರೆ, ಹೆಚ್ಚಿನ ಚೀನೀಯರಿಗೆ ಅವರ ಸಾವಿನ ಬಗ್ಗೆ ಅಥವಾ ಅವರು ಯಾರು ಎಂಬ ಬಗ್ಗೆಯೂ ಮಾಹಿತಿಯಿಲ್ಲ. ಗೂಗಲ್ ಮಾದರಿಯ ಚೀನಾದ ಮಾಹಿತಿ ಹುಡುಕುವ ಸರ್ಚ್ ಇಂಜಿನ್ ‘ಬೈಡು’ನಲ್ಲಿ ಅವರ ಸಾವಿನ ಬಗ್ಗೆ ಮಾಹಿತಿ ಹುಡುಕಿದರೆ, ‘ಯಾವುದೇ ಮಾಹಿತಿಯಿಲ್ಲ’ ಎಂಬ ಉತ್ತರ ನೀಡಿತು. ಟ್ವಿಟರ್‌ನಂತೆ ಕೆಲಸ ಮಾಡುವ ಚೀನಾದ ‘ವೈಬೊ’ ಅವರ ಹೆಸರು ಮತ್ತು ಅವರ ಹೆಸರಿನ ಸಂಕ್ಷಿಪ್ರ ರೂಪ ‘ಎಲ್‌ಎಕ್ಸ್‌ಬಿ’ಯನ್ನು ನಿಷೇಧಿಸಿದೆ.
ಅತ್ಯಂತ ಗುಪ್ತವಾಗಿ ಲಿಯು ಅವರಿಗೆ ಸಲ್ಲಿಸಲಾದ ಶ್ರದ್ಧಾಂಜಲಿಗಳನ್ನೂ ವೈಬೊ ತೆಗೆದುಹಾಕಿದೆ.ಶೋಕತಪ್ತ ಅಭಿಮಾನಿಗಳು ವೈಬೊದಲ್ಲಿ ಹಾಕಿರುವ ಮೇಣದಬತ್ತಿಯ ಚಿತ್ರಗಳನ್ನೂ ಅಳಿಸಿಹಾಕಲಾಗಿದೆ.
ಲಿಯು ಸಾವಿನ ಹೊಣೆ ಚೀನಾ ಸರಕಾರದ ಮೇಲೆ: ನಾರ್ವೆ ನೊಬೆಲ್ ಸಮಿತಿ
ಓಸ್ಲೊ (ನಾರ್ವೆ), ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಹಾಗೂ ಪ್ರಜಾಪ್ರಭುತ್ವ ಹೋರಾಟಗಾರ ಲಿಯು ಕ್ಸಿಯಾವೊಬೊ ಸಾವಿನ ಹೊಣೆ ಚೀನಾ ಸರಕಾರದ ಮೇಲಿದೆ ಎಂದು ನಾರ್ವೆ ನೊಬೆಲ್ ಸಮಿತಿಯ ಮುಖಂಡ ಬೆರಿಟ್ ರೀಸ್-ಆ್ಯಂಡರ್‌ಸನ್ ಗುರುವಾರ ಹೇಳಿದ್ದಾರೆ.
ನೊಬೆಲ್ ಪ್ರಶಸ್ತಿಗಳ ಘೋಷಣೆಯನ್ನು ನಾರ್ವೆ ನೊಬೆಲ್ ಸಮಿತಿ ಮಾಡುತ್ತದೆ.
‘‘ಕ್ಯಾನ್ಸರ್ ಗುಣಪಡಿಸಲಾಗದ ಹಂತ ತಲುಪುವವರೆಗೂ ಸರಿಯಾದ ಚಿಕಿತ್ಸೆ ಪಡೆಯುವ ಸ್ಥಳಕ್ಕೆ ಅವರನ್ನು ಕರೆದೊಯ್ಯದಿರುವುದು ಆಘಾತಕಾರಿಯಾಗಿದೆ’’ ಎಂದು ಅವರು ‘ರಾಯ್ಟರ್ಸ್’ಗೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
‘‘ಕ್ಸಿಯಾವೊಬೊ ಅವರ ಅಕಾಲಿಕ ಸಾವಿನ ಸಂಪೂರ್ಣ ಹೊಣೆಯನ್ನು ಚೀನಾ ಸರಕಾರ ಹೊರುತ್ತದೆ’’ ಎಂದು ಅವರು ಹೇಳಿದ್ದಾರೆ.







