ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹರಿಸುವೆ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
.jpg)
ಹಾಸನ, ಜು.14: ಜಿಲ್ಲೆಯಲ್ಲಿ ತೀವ್ರ ಬರಗಾಲ, ಕುಡಿಯುವ ನೀರು, ರೈತರ ಸಮಸ್ಯೆ, ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಸೇರಿದಂತೆ ಇನ್ನಿತರೆ ಹಲವು ಜ್ವಲಂತ ಸಮಸ್ಯೆಗಳಿದ್ದು, ರೈತರ ಪ್ರಮುಖ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ನೂತನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದರು.
ನಗರದ ಹಾಸನ ಜಿಲ್ಲಾಧಿಕಾರಿಯಾಗಿ ಶುಕ್ರವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪ್ರಮುಖವಾಗಿ ಕೇಳಿ ಬಂದಿತು. ಕೃಷಿ ಪ್ರಧಾನ ಜಿಲ್ಲೆಯಾಗಿರುವ ಹಾಸನದಲ್ಲಿ ಒಂದೇ ಬೆಳೆ ಬೆಳೆಯುವುದಿಲ್ಲ. ಬಹು ಬೆಳೆಗಳನ್ನು ಬೆಳೆಯುತ್ತಾರೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಗಮನಹರಿಸಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಜಿಲ್ಲೆಯಲ್ಲಿ 3 ಜಲಾಶಯಗಳಿದ್ದು, ಕುಡಿಯುವ ನೀರಿಗೆ ಸಮಸ್ಯೆ ಇರುವ ಬಗ್ಗೆ ತಿಳಿದುಕೊಂಡಿದ್ದೇನೆ. 800 ಅಡಿ ಕೊರೆದರು ನೀರೂ ಸಿಗುತ್ತಿಲ್ಲ. ಆದ್ದರಿಂದ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಶೀಘ್ರದಲ್ಲೇ ತಾಲೂಕುವಾರು ಪ್ರವಾಸ ಮಾಡಿ ರೈತರ ಸಮಸ್ಯೆಯನ್ನು ಆಲಿಸಲಾಗುವುದು ಎಂದು ಹೇಳಿದರು. ಮೊದಲು ಮಂಡ್ಯ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಇದ್ದಾಗ ಕಬ್ಬಿನ ಸಮಸ್ಯೆ ಬಗ್ಗೆ ರೈತರು ಗಮನಸೆಳೆದಿದ್ದರು. ಇಲ್ಲಿ ಒಂದೇ ಬೆಳೆ ಬೆಳೆಯುವುದಿಲ್ಲ. ಬಹು ಬೆಳೆಗಳನ್ನು ಬೆಳೆಯುತ್ತಾರೆ. ಬೆಳೆ ನಷ್ಟವಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸುವುದಾಗಿ ಭರವಸೆ ನೀಡಿದರು. ಜಿಲ್ಲೆಯೂ ಅತ್ಯಂತ ರಾಜಕೀಯ ಪ್ರಾಬಲ್ಯಹೊಂದಿರುವ ಜಿಲ್ಲೆಯಾಗಿದ್ದು, ಕಾನೂನಿನ ಪ್ರಕಾರ ಕೆಲಸ ಮಾಡುವ ಮೂಲಕ ಜನಪರ ಆಡಳಿತ ನೀಡಿ ಜನರ ಸಮಸ್ಯೆಗೆ ಸ್ಪಂದಿಸಿ, ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಲಾಗುವುದು ಎಂದರು.
ನಾನು ಶಾಲೆ ದಿನಗಳ ಅವಧಿಯಲ್ಲಿ ಮಹಾಮಸ್ತಕಾಭಿಷೇಕದ ಬಗ್ಗೆ ಓದಿ ತಿಳಿದುಕೊಂಡಿದ್ದೆ. 12 ವರ್ಷಕ್ಕೊಮ್ಮೆ ಶ್ರವಣಬೆಳಗೊಳದಲ್ಲಿ ನಡೆಯುವ ಬಾಹುಬಲಿ ಗೊಮ್ಮಟೇಶ್ವರಸ್ವಾಮಿಯ ಮಹಾಮಸ್ತಕಾಭಿಷೇಕದ ಬಗ್ಗೆ ತಿಳಿದುಕೊಂಡಿದ್ದೆ. ಆದರೆ ಮುಂದಿನ ವರ್ಷ ನಡೆಯುವ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ನಾನು ಜಿಲ್ಲಾಧಿಕಾರಿಯಾಗಿ ಆಗಮಿಸಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.







