ಅಮರನಾಥ ಯಾತ್ರಿಕರ ಮೇಲೆ ದಾಳಿ ಪ್ರಕರಣ: ತನಿಖೆಗೆ ವಿಶೇಷ ತನಿಖಾ ತಂಡ ರಚನೆ

ಶ್ರೀನಗರ, ಜು.14: ಅಮರನಾಥ ಯಾತ್ರೆಗೆ ಹೊರಟಿದ್ದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಮೇಲೆ ಜುಲೈ 10ರಂದು ನಡೆದಿದ್ದ ಉಗ್ರರ ದಾಳಿ ಪ್ರಕರಣದ ತನಿಖೆ ನಡೆಸಲು ಜಮ್ಮು-ಕಾಶ್ಮೀರ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದಾರೆ.
ದಾಳಿ ಪ್ರಕರಣದ ತನಿಖೆ ಶೀಘ್ರಗತಿಯಲ್ಲಿ ಸಾಗಬೇಕೆಂಬ ಉದ್ದೇಶದಲ್ಲಿ ದಕ್ಷಿಣ ಕಾಶ್ಮೀರ ಡಿಐಜಿ ಎಸ್.ಪಿ.ಪಾನಿ ನೇತೃತ್ವದಲ್ಲಿ ಆರು ಮಂದಿಯ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ. ಅನಂತನಾಗ್‌ನ ಹಿರಿಯ ಪೊಲೀಸ್ ಅಧೀಕ್ಷಕ ಅಲ್ತಾಫ್ ಅಹ್ಮದ್‌ಖಾನ್, ಉಪ ಅಧೀಕ್ಷಕರು ಸಮಿತಿಯಲ್ಲಿದ್ದಾರೆ.
ಶ್ರೀನಗರದಿಂದ ಜಮ್ಮುವಿಗೆ ಹೊರಟಿದ್ದ ಈ ಬಸ್ಸಿನ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಏಳು ಯಾತ್ರಾರ್ಥಿಗಳು ಮೃತಪಟ್ಟಿದ್ದು 19 ಮಂದಿ ಗಾಯಗೊಂಡಿದ್ದರು. ಈ ಬಸ್ಸನ್ನು ಅಮರನಾಥ ದೇವಸ್ಥಾನ ಮಂಡಳಿಯಲ್ಲಿ ನೋಂದಾಯಿಸಿರಲಿಲ್ಲ ಮತ್ತು ಇದು ಪ್ರಯಾಣ ನಿಯಮವನ್ನು ಉಲ್ಲಂಘಿಸಿತ್ತು ಎಂದು ವರದಿಯಾಗಿದೆ.
Next Story





