ಚಿತ್ರ ನಿರ್ದೇಶಕನಿಗೆ ಹೈಕೋರ್ಟ್ ಜಾಮೀನು
ಪ್ರಚಾರಕ ಪರಮೇಶ್ ಅಪಹರಣ ಪ್ರಕರಣ
.jpg)
ಬೆಂಗಳೂರು, ಜು.14: ವಿಜಯ್ ರಾಘವೇಂದ್ರ ನಟನೆಯ ಎರಡು ಕನಸು ಚಿತ್ರದ ಪ್ರಮೋಶನ್ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಪ್ರಚಾರಕ ಪರಮೇಶ್ ಎಂಬುವರನ್ನು ಅಪಹರಣ ಮಾಡಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಿರ್ದೇಶಕ ಎ.ಮದನ್ ಸೇರಿ ಐವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಈ ಸಂಬಂಧ ಜಾಮೀನು ಕೋರಿ ನಿರ್ದೇಶಕ ಎ.ಮದನ್ ಹಾಗೂ ಮತ್ತಿತರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರತ್ನಕಲಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು. ಈ ಹಿಂದೆ ಎ.ಮದನ್ ಹಾಗೂ ಇತರ ನಾಲ್ವರು ಆರೋಪಿಗಳಿಗೆ ಜಾಮೀನು ನೀಡಲು ಅಧೀನ ್ಯಾಯಾಲಯ ನಿರಾಕರಿಸಿತ್ತು. ಆದರೆ, ಶುಕ್ರವಾರ ಹೈಕೋರ್ಟ್ ನ್ಯಾಯಪೀಠ ಮದನ್ ಸೇರಿ ಐವರಿಗೆ ಜಾಮೀನು ಮಂಜೂರು ಮಾಡಿದೆ.
ಪ್ರಕರಣವೇನು: ಎರಡು ಕನಸು ಚಿತ್ರದ ಪ್ರಚಾರಕ್ಕಾಗಿ ಸಿನಿಮಾ ಜಾಹೀರಾತು ಪ್ರಚಾರಕ ಪರಮೇಶ್‌ಗೆ ನಿರ್ದೇಶಕ ಮದನ್ 33.33 ಲಕ್ಷ ರೂ. ನೀಡಿದ್ದರು ಎನ್ನಲಾಗಿದೆ. ಆದರೆ, ಚಿತ್ರದ ಪ್ರಮೋಶನ್ ಸರಿಯಾಗಿ ಮಾಡದ ಕಾರಣಕ್ಕೆ ಹಣ ವಾಪಸ್ ಕೇಳಲಾಗಿತ್ತು. ಒಪ್ಪಂದಂತೆ 8 ಲಕ್ಷ ರೂ. ಹಿಂದಿರುಗಿಸಿದ್ದ ಪ್ರರಮೇಶ್, ಉಳಿದ ಹಣ ವಾಪಸ್ ನೀಡಲು ಸತಾಯಿಸಿದ್ದರು. ಇದರಿಂದ ಮದನ್ ಹಾಗೂ ಆತನ ನಾಲ್ವರು ಪರಮೇಶ್ ಅವರನ್ನು ಬಸವೇಶ್ವರ ಮನೆಯಿಂದ ಅಪಹರಿಸಿದ್ದರು. ತನಿಖೆ ನಡೆಸಿದ್ದ ಮಾಗಡಿ ರಸ್ತೆ ಪೊಲೀಸರು ಮದನ್ ಹಾಗೂ ಇತರೆ ಆರೋಪಿಗಳನ್ನು ಬಂಧಿಸಿದ್ದರು. ಅಧೀನ ನ್ಯಾಯಾಲಯವು ಜೂನ್ 12ರಂದು ಆರೋಪಿಗಳಿಗೆ ಜಾಮೀನು ನಿರಾಕರಿಸಿತ್ತು.







