ಕೆರೆಯಂಗಳದಲ್ಲಿ ಧರಣಿಗೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಬೆಂಬಲ
ನೀರಾವರಿ ಸಚಿವರ ಅಣಕು ಶವಯಾತ್ರೆ

ಮದ್ದೂರು, ಜು.14: ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಸ್ಥಗಿತಗೊಳಿಸಿ ಜಲಾಶಯದ ನಾಲೆಗಳಿಗೆ ಹರಿಸುವಂತೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ತಾಲೂಕಿನ ದೇಶಹಳ್ಳಿ ಕೆರೆಯಂಗಳದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಶಾಸಕ, ರೈತಸಂಘದ ವರಿಷ್ಠ ಕೆ.ಎಸ್.ಪುಟ್ಟಣ್ಣಯ್ಯ ಬೆಂಬಲ ನೀಡಿದರು.
ಶುಕ್ರವಾರ 7ನೆ ದಿನದ ಧರಣಿಗೆ ಪುಟ್ಟಣ್ಣಯ್ಯ ಸೇರಿದಂತೆ ವಿಶ್ವಕರ್ಮ ಸಮುದಾಯದವರು, ಎಳೆನೀರು ಮಾರುಕಟ್ಟೆ ವರ್ತಕರು, ಚಾಮನಹಳ್ಳಿ ಗ್ರಾಪಂ ಸದಸ್ಯರು, ಸೋಂಪುರದವರು, ಇತರ ಸಂಘಟನೆಗಳು ಧರಣಿಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಕೆ.ಎಸ್.ಪುಟ್ಟಣ್ಣಯ್ಯ, ಒಂದು ವಾರದಿಂದ ಕೆರೆಯಂಗಳದಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿದ್ದರೂ ರಾಜ್ಯ ಸರಕಾರವಾಗಲೀ, ಸಂಬಂಧಪಟ್ಟ ಇಲಾಖೆಯಾಗಿಲಿ ಸ್ಪಂದಿಸಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಮೂರು ವರ್ಷದಿಂದ ಬರದ ದವಡೆಗೆ ಸಿಲುಕಿರುವ ರೈತಾಪಿ ಜನ ತತ್ತರಿಸಿ ಹೋಗಿದ್ದಾರೆ. ಕುಡಿಯುವ ನೀರಿಗೂ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ನೀರುಹರಿಸಲಾಗುತ್ತಿದೆ ಎಂದು ಅವರು ವಿಷಾದಿಸಿದರು.
ರಾಜ್ಯ ಸರಕಾರ ರೈತರ ಸಂಕಷ್ಟವನ್ನು ಅರಿಯಬೇಕು. ಸುಪ್ರೀಂಕೋರ್ಟ್ ನೀಡಿದ ಆದೇಶಕ್ಕನುಗುಣವಾಗಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂಬ ನೆಪವನ್ನಿಟ್ಟುಕೊಂಡು ನಾಡಿನ ಜನರನ್ನು ಕಡೆಗಣಿಸಬಾರದು ಎಂದು ಅವರು ಸಲಹೆ ಮಾಡಿದರು.
ಜಲಾಶಯಕ್ಕೆ ಅಲ್ಪಸ್ವಲ್ಪ ನೀರು ಬರುತ್ತಿದ್ದು, ಧರಣಿನಿರತರ ಬೇಡಿಕೆಯಂತೆ ಕೂಡಲೇ ನಾಲೆಗಳಲ್ಲಿ ನೀರುಹರಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆಯನ್ನಾದರೂ ನೀಗಿಸಬೇಕೆಂದು ಒತ್ತಾಯಿಸಿದ ಪುಟ್ಟಣ್ಣಯ್ಯ, ಜನಪರ ಪ್ರತಿಭಟನೆಗೆ ತಮ್ಮ ಬೆಂಬಲ ಸದಾವಿರುತ್ತದೆ ಎಂದು ಭರವಸೆ ನೀಡಿದರು.
ಸಚಿವರ ಶವಯಾತ್ರೆ: ಶುಕ್ರವಾರ ಧರಣಿ ನಿರತರು ಬೇಡಿಕೆಗೆ ಸ್ಪಂದಿಸದ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಅವರ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಕೆರೆಗೆ ನೀರು ಬಂದ ನಂತರ ಶವಸಂಸ್ಕಾರ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಹೇಳಿದರು.
ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ್, ಗುಂಡ ಮಹೇಶ್, ಎಳನೀರು ಮಾರುಕಟ್ಟೆ ವರ್ತಕರ ಸಂಘದ ಅಧ್ಯಕ್ಷ ರವಿಚನ್ನಸಂದ್ರ, ಉಪಾಧ್ಯಕ್ಷ ಉಮೇಶ್, ಕಾರ್ಯಾಧ್ಯಕ್ಷ ರಾಜು, ಚಾಮನಹಳ್ಳಿ ಗ್ರಾಪಂ ಅಧ್ಯಕ್ಷ ದಾಸಪ್ಪ, ಉಪಾಧ್ಯಕ್ಷೆ ಸಿದ್ದಮ್ಮ, ಸದಸ್ಯ ಸತೀಶ್, ವಿಶ್ವಕರ್ಮ ಜನಾಂಗದ ಬಸವರಾಜು, ತೀರ್ಥಾಚಾರಿ, ಸೋಂಪುರದ ಎಸ್.ಆರ್.ಉಮೇಶ್, ಎಸ್.ಎಲ್.ಉಮೇಶ್, ರೈತಸಂಘದ ರಾಜ್ಯ ಉಪಾಧ್ಯಕ್ಷ ಕೋಣಸಾಲೆ ನರಸರಾಜು, ಇತರರು ಧರಣಿಯಲ್ಲಿ ಭಾಗವಹಿಸಿದ್ದರು.







