ಮಕ್ಕಳ 3,500 ಅಶ್ಲೀಲ ವೆಬ್‌ಸೈಟ್‌ಗೆ ತಡೆ: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಮಾಹಿತಿ

ಹೊಸದಿಲ್ಲಿ, ಜು. 14: ಮಕ್ಕಳ ಅಶ್ಲೀಲ ಚಿತ್ರಗಳನ್ನು ಒಳಗೊಂಡಿರುವ ವೆಬ್‌ಸೈಟ್‌ಗಳು ಲಭ್ಯವಾಗದಂತೆ ತಡೆಹಿಡಿಯಲು ಶಾಲೆಗಳಲ್ಲಿ ಜಾಮರ್‌ಗಳನ್ನು ಅಳವಡಿಸಬೇಕೇ ಎಂಬುದನ್ನು ಪರಿಶೀಲಿಸುವಂತೆ ಸಿಬಿಎಸ್‌ಇಯಲ್ಲಿ ಕೋರಿದ್ದೇವೆ ಎಂದು ಕೇಂದ್ರ ಸರಕಾರ ಶುಕ್ರವಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ಮಕ್ಕಳ ಅಶ್ಲೀಲ ಚಿತ್ರಗಳ ವೆಬ್‌ಸೈಟ್‌ಗಳನ್ನು ನಿಯಂತ್ರಿಸಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಕಳೆದ ತಿಂಗಳು ಇಂತಹ ಅಂಶವಿರುವ ಸುಮಾರು 3,500 ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಸುಪ್ರೀಂ ಕೋರ್ಟ್ ತಿಳಿಸಿದೆ.
ದೇಶಾದ್ಯಂತ ಮಕ್ಕಳ ಅಶ್ಲೀಲ ಚಿತ್ರದ ಪಿಡುಗಳನ್ನು ಮಟ್ಟಹಾಕಲು ಕೇಂದ್ರ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ನಡೆಸಿತು.
ಮಕ್ಕಳ ಅಶ್ಲೀಲ ಚಿತ್ರಗಳನ್ನು ತಡೆ ಹಿಡಿಯಲು ಶಾಲೆಗಳಲ್ಲಿ ಜಾಮರ್ ಅಳವಡಿಸುವ ಬಗ್ಗೆ ಪರಿಶೀಲನೆ ನಡೆಸುವಂತೆ ಸಿಬಿಎಸ್‌ಇಯಲ್ಲಿ ವಿಂತಿಸಿದ್ದೇವೆ ಎಂದು ಜಸ್ಟಿಸ್ ದೀಪಿಕಾ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ಸರಕಾರ ಹೇಳಿದೆ.
ಶಾಲೆ ಬಸ್‌ಗಳಲ್ಲಿ ಜಾಮರ್‌ಗಳನ್ನು ಅಳವಡಿಸಲು ಸಾಧ್ಯವಾಗಲಾರದು ಎಂದು ನ್ಯಾಯಮೂರ್ತಿ ಎಎಂ ಖಾನ್ವಿಲ್ಕಾರ್ ಹಾಗೂ ಎಂ.ಎಂ. ಶಾಂತನಗೌಡರ್ ಕೂಡ ಇದ್ದ ಪೀಠಕ್ಕೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ ತಿಳಿಸಿದ್ದಾರೆ.
ಮಕ್ಕಳ ಅಶ್ಲೀಲಚಿತ್ರ ಲಭ್ಯವಾಗದಂತೆ ತಡೆಹಿಡಿಯಲು ತೆಗದುಕೊಂಡ ಕ್ರಮಗಳ ಬಗ್ಗೆ ಸ್ಥಿತಿ ವರದಿ ಸಲ್ಲಿಸಲಿದ್ದೇವೆ ಎಂದು ಸರಕಾರ ನ್ಯಾಯಾಲಯಕ್ಕೆ ತಿಳಿಸಿತು. ಎರಡು ದಿನಗಳಲ್ಲಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಕೇಂದ್ರ ಸರಕಾರಕ್ಕೆ ಆದೇಶಿಸಿದೆ.







