ಯಾವುದೇ ಲೋಪದೋಷ ಇಲ್ಲದೆ, ಜನ ಪರ ಕೆಲಸ ಮಾಡುವ ಸರಕಾರ ನಮ್ಮದು: ಸಿದ್ದರಾಮಯ್ಯ

ಚಾಮರಾಜನಗರ, ಜು.14: ನಾಲ್ಕು ವರ್ಷ ಎರಡು ತಿಂಗಳ ಆಡಳಿತದಲ್ಲಿ ಯಾವುದೇ ಲೋಪದೋಷ ಇಲ್ಲದೆ, ಜನ ಪರ ಕೆಲಸ ಮಾಡುವ ಸರ್ಕಾರ ನಮ್ಮದ್ದಾಗಿದ್ದು, ಆಡಳಿತದಲ್ಲಿ ಜನ ಮೆಚ್ಚುಗೆ ಪಡೆದಿದ್ದೇವೆ. ಅದೂ ಅಲ್ಲದೇ ಚಾಮರಾಜನಗರ ಜಿಲ್ಲೆಯ ಜನತೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಮುಂದೆಯೂ ಕೂಡ ಬೆಂಬಲಿಸಲಿದ್ದು, ಜಿಲ್ಲೆ ಕಾಂಗ್ರೇಸ್ ಭದ್ರಕೋಟೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು.
ಅವರು ಚಾಮರಾಜನಗರ ತಾಲ್ಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ನಂಜನಗೂಡು, ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕಿನ 24 ಕೆರೆಗಳಿಗೆ ಕಬಿನಿ ನದಿಯಿಂದ ನೀರು ತುಂಬಿಸುವ ಬೃಹತ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ರಾಜ್ಯದಲ್ಲಿ ತಮ್ಮ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬಳಿಕ ಬಡವರ, ರೈತರ ಪರವಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರಲ್ಲೂ ನೀರಾವರಿಗೆ ಹೆಚ್ಚಿನ ಅನುದಾನ ನೀಡಿದ್ದು, ಇದೂವರೆಗೂ 40 ಸಾವಿರ ಕೋಟಿ ರೂ.ಗಳಿಗೂ ಅಧಿಕ ಅನುದಾನ ಬಿಡುಗಡೆ ಮಾಡಿದೆ ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯಲ್ಲಿ ಈ ಹಿಂದೆ ಇದ್ದ ಸರ್ಕಾರದ ಆಡಳಿತಾವಧಿಯಲ್ಲಿ ನೀರಾವರಿಗೆ 10 ಸಾವಿರ ಕೋಟಿಗಳನ್ನು ಖರ್ಚು ಮಾಡಿಲ್ಲ. ಆದರೆ ಈಗಿನ ಸರ್ಕಾರ ನಾಲ್ಕು ವರ್ಷ ಎರಡು ತಿಂಗಳಲ್ಲಿ 40 ಸಾವಿರ ಕೋಟಿಗೂ ಹೆಚ್ಚು ಹಣ ವೆಚ್ಚ ಮಾಡಿದ್ದೇವೆ ಎಂದು ಹೇಳಿದ್ದಲ್ಲದೇ, ಬಡವರ ಪರವಾಗಿರುವ ಹಲವಾರು ಭಾಗ್ಯವನ್ನು ಜಾರಿಗೆ ತಂದಿದ್ದು, ಅದರಲ್ಲೂ ಕಳೆದ ಅಧಿವೇಶನದಲ್ಲಿ ರೈತರ ಸಾಲಮನ್ನಾ ಮಾಡಿದ್ದು, ಸಹಕಾರಿ ಬ್ಯಾಂಕ್‌ಗಳಲ್ಲಿ ಸಾಲ ಪಡೆದಿರುವ ಮೊತ್ತದಲ್ಲಿ 50 ಸಾವಿರ ರೂಗಳಷ್ಟು ಸಾಲವನ್ನು ಮನ್ನಾ ಮಾಡಲು ಆದೇಶ ನೀಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಯಾರೂ ಏನೇ ಹೇಳಲಿ, ರಾಜ್ಯದ ಜನತೆ ನಮ್ಮ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಅದೇ ರೀತಿಯಾಗಿ 2018 ರಲ್ಲಿ ನಡೆಯುವ ಸಾರ್ವತ್ರಿಕ ಚುನವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಮತ್ತೇ ಅಧಿಕಾರಕ್ಕೆ ನಮ್ಮನ್ನೇ ಆರಿಸುತ್ತಾರೆ ಎಂದು ಹೇಳಿದರು.
ಉಮ್ಮತ್ತೂರು ಕೆರೆಗೆ ನದಿ ಮೂಲದಿಂದ ಕುಡಿಯುವ ನೀರು ತುಂಬಿಸುವ ಯೋಜನೆಗೆ ಕಳೆದ 30 ವರ್ಷದಿಂದ ಈ ಭಾಗದ ರೈತರು ಮತ್ತು ಗ್ರಾಮಸ್ಥರು ಪ್ರಯತ್ನಿಸುತ್ತಿದ್ದರು. ಆದರೆ ಅದು ಕಾರ್ಯಗತವಾಗಿದ್ದು ಹೆಚ್.ಎಸ್. ಮಹದೇವಪ್ರಸಾದ್ ರವರ ಪ್ರಯತ್ನದಿಂದಾಗಿ ಉಮ್ಮತ್ತೂರು ಕೆರೆಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ಬಂತು. ಆದರೆ ಅನುಷ್ಠಾನಕ್ಕೆ ತರುವಲ್ಲಿ ಪ್ರಯತ್ನ ಮಾಡಿದ ಮಹದೇವಪ್ರಸಾದ್ ಯೋಜನೆ ಅನುಷ್ಠಾನಕ್ಕೆ ಬರುವ ವೇಳೆಯಲ್ಲಿ ಇಲ್ಲದಿರುವುದು ಮನಸ್ಸಿಗೆ ತುಂಬಾ ನೋವಾಗಿದೆ ಎಂದರು.
ಪ್ರಸ್ತುತ ಉಮ್ಮತ್ತೂರು ಕೆರೆಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಗೆ ನಿಗದಿ ಪಡಿಸಿದ 24 ಕೆರೆಗಳ ಜೊತೆಗೆ ಕೆಂಪನಪುರ ಕೆರೆ, ಹನುಮನಪುರ ಕೆರೆ, ಚಂಚಳ್ಳಿ ಕೆರೆ, ಕಥಾನಾಯಕನ ಕೆರೆ ಮತ್ತು ಕಾರ್ಯ ಕೆರೆಗಳನ್ನು ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗುವುದು ಎಂದು ಇದೇ ವೇಳೆ ನೆರೆದಿದ್ದ ಗ್ರಾಮಸ್ಥರಿಗೆ ಬರವಸೆ ನೀಡಿದರು.ಮುಂದಿನ ದಿನಗಳಲ್ಲಿ ಹನೂರು ವಿಧಾನ ಸಭಾ ಕ್ಷೇತ್ರದ ಕೆರೆಗಳಿಗೂ ಸಹ ನದಿ ಮೂಲದಿಂದ ನೀರು ತುಂಬಿಸುವ ಯೋಜನೆ ಸಿದ್ದಪಡಿಸಲಾಗುವುದು ಎಂದು ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬರವಸೆ ನೀಡಿದರು.
ಜಲಸಂಪನ್ಮೂಲ ಸಚಿವ ಎಂ.ಬಿ ಪಾಟೀಲ್ ಮಾತನಾಡಿ, ಮೂರು ರಾಜ್ಯಗಳ ಗಡಿ ಹೊಂದಿರುವ ಚಾಮರಾಜನಗರ ಜಿಲ್ಲೆಯೂ ಹಿಂದುಳಿದ್ದು, ಇಲ್ಲಿಗೆ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಗಳು ಭೇಟಿ ಕೊಟ್ಟರೆ ಅಧಿಕಾರ ಕಳೆದು ಕೊಳ್ಳುತ್ತಾರೆ ಅನ್ನೋ ಹಣೆ ಪಟ್ಟಿ ಕಟ್ಟಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚಾಮರಾಜನಗರ ಜಿಲ್ಲೆಗೆ ಸರಿ ಸುಮಾರು 12 ಬಾರಿ ಆಗಮಿಸಿ, ಮೂಢನಂಬಿಕೆಯನ್ನು ತೊಡೆದು ಹಾಕಿದ್ದಾರೆ ಎಂದರು.
ಜಿಲ್ಲಾ ಉಸ್ತವಾರಿ ಸಚಿವ ಯು ಟಿ ಖಾದರ್, ಸಂಸದ ಆರ್. ಧೃವನಾರಾಯಣ್, ಕೊಳ್ಳೇಗಾಲ ಶಾಸಕ ಎಸ್.ಜಯಣ್ಣ, ಚಾಮರಾಜನಗರ ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಲೋಕೋಪಯೊಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ, ಶಾಸಕರಾದ ಆರ್. ನರೇಂದ್ರ, ಡಾ. ಎಂ.ಸಿ ಮೋಹನಕುಮಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಂ.ರಾಮಚಂದ್ರ ಸೇರಿದಂತೆ ಹಲವಾರು ಜನಪ್ರತಿನಿಧಿಗಳು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ, ಕುದೇರಿನಲ್ಲಿರುವ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ನೂತನ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದರು. ರೈತರಿಂದ ಮನವಿ ಸ್ವೀಕರಿಸಿ, ರೈತರ ಮೇಲೆ ದಾಖಲಾಗಿರುವ ಪೊಲೀಸ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಸರ್ಕಾರ ಬದ್ದವಾಗಿದೆ ಎಂದು ಭರವಸೆ ನೀಡಿದರು.







