ಹವಾಮಾನದ ಬಗ್ಗೆ ತಪ್ಪು ಮುನ್ಸೂಚನೆ: ಇಲಾಖೆಯ ವಿರುದ್ಧ ದೂರು ನೀಡಿದ ರೈತರು

ಮುಂಬೈ, ಜು.14: ಹವಾಮಾನಶಾಸ್ತ್ರ ಇಲಾಖೆಯ ಅಧಿಕಾರಿಗಳು ಮಳೆಯ ಬಗ್ಗೆ ನೀಡಿದ್ದ ಮುನ್ಸೂಚನೆಯನ್ನು ನಂಬಿ ಕೃಷಿ ಕಾರ್ಯ ಆರಂಭಿಸಿರುವ ರೈತರಿಗೆ ಲಕ್ಷಾಂತರ ರೂ.ನಷ್ಟವಾಗಿದೆ ಎಂದು ಆರೋಪಿಸಿ ರೈತರು ಇಲಾಖೆಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ.
ಹವಾಮಾನ ಇಲಾಖೆಯ ಅಧಿಕಾರಿಗಳು ಹಾಗೂ ಬೀಜ ಮತ್ತು ರಸಗೊಬ್ಬರ ಕಂಪನಿಯವರು ಸೇರಿಕೊಂಡು ಒಳಸಂಚು ನಡೆಸಿ ರೈತರಿಗೆ ತಪ್ಪು ಮಾಹಿತಿ ನೀಡಿದ್ದರಿಂದ ರೈತರಿಗೆ ಭಾರೀ ನಷ್ಟವಾಗಿದೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಜಲ್‌ಗಾಂವ್ ಠಾಣೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಬಾರಿ ಮುಂಗಾರಿನಲ್ಲಿ ಭರ್ಜರಿ ಮಳೆಯಾಗಲಿದ್ದು ಖಾರಿಫ್ ಬೆಳೆಗೆ ಅನುಕೂಲವಾಗಲಿದೆ ಎಂದು ಭಾರತೀಯ ಹವಾಮಾನಶಾಸ್ತ್ರ ಇಲಾಖೆ ಮುನ್ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತಾವು ಲಕ್ಷಾಂತರ ರೂ. ವ್ಯಯಿಸಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಖರೀದಿಸಿ ಕೃಷಿ ಕಾರ್ಯ ಆರಂಭಿಸಿದ್ದೆವು. ಆದರೆ ಆರಂಭದಲ್ಲಿ ಒಂದಿಷ್ಟು ಮಳೆ ಸುರಿದಿರುವುದನ್ನು ಬಿಟ್ಟರೆ ಬಳಿಕ ಮಳೆಯ ಸುಳಿವೇ ಇಲ್ಲ. ಈಗ ರೈತರ ಪ್ರಯತ್ನ ಎಲ್ಲಾ ವ್ಯರ್ಥವಾಗಿದೆ ಎಂದು ದೂರಿರುವ ಬೀಡ್ ಜಿಲ್ಲೆಯ ಆನಂದ್‌ಗಾಂವ್ ಗ್ರಾಮದ ಗಂಗಭೀಷಣ್ ಥವರೆ ಎಂಬ ರೈತ , ಇತರ ರೈತರೊಂದಿಗೆ ಸೇರಿಕೊಂಡು ಹವಾಮಾನ ಇಲಾಖೆಯ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ರೈತರು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಮನವಿಪತ್ರ ಬರೆದಿದ್ದಾರೆ ಎಂದವರು ಹೇಳಿದ್ದಾರೆ.







