ಸ್ಕಿಲ್‌ಗೇಮ್ ಕ್ಲಬ್‌ಗೆ ಮೇಯರ್ ದಾಳಿ ಪ್ರಕರಣ: ಬೀಗ ಮುರಿದು ಕಾರ್ಯಾಚರಿಸಿದ ಕ್ಲಬ್ ವಿರುದ್ಧ ದೂರು
ಮಂಗಳೂರು, ಜು. 14: ನಗರದ ಬಲ್ಮಠ- ಫಳ್ನೀರ್ ಸಾಗುವ ರಸ್ತೆಯಲ್ಲಿರುವ ಸ್ಕಿಲ್‌ಗೇಮ್ ಕ್ಲಬ್‌ವೊಂದಕ್ಕೆ ಮೇಯರ್ ದಾಳಿ ಮಾಡಿ ಬೀಗ ಹಾಕಿದ್ದರೂ ಕೂಡ ಮತ್ತೆ ಬೀಗ ಮುರಿದು ಕಾರ್ಯಾಚರಿಸುತ್ತಿದ್ದ ಕ್ಲಬ್ ವಿರುದ್ಧ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದ ಮಸಾಜ್ ಸೆಂಟರ್ ಹಾಗೂ ಲೈಸೆನ್ಸ್ ಇಲ್ಲದೆ ಕಾರ್ಯಾಚರಿಸುತ್ತಿದ್ದ ಸ್ಕಿಲ್‌ಗೇಮ್ ಕ್ಲಬ್‌ಗೆ ಮೇಯರ್ ಕವಿತಾ ಸನಿಲ್ ಪಾಲಿಕೆ ಅಧಿಕಾರಿಗಳಾದ ಮಂಜಯ್ಯ ಶೆಟ್ಟಿ, ಕರುಣಾಕರ್, ಯಶವಂತ, ಸುಶಾಂತ್ ಜು.11ರಂದು ದಾಳಿ ಮಾಡಿದ್ದರು. ಈ ವೇಳೆ ಸುಮಾರು 50ಕ್ಕಿಂತಲೂ ಅಧಿಕ ಮಂದಿ ಹಣ ಪಣವಾಗಿಟ್ಟು ಜೂಜಾಟ ನಡೆಸಿದ್ದು, ಅಧಿಕಾರಿಗಳನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದರು.
ಈ ವೇಳೆ ಲೈಸೆನ್ಸ್ ತೋರಿಸಲು ಹೇಳಿದಾಗ, ಸ್ಕಿಲ್‌ಗೇಮ್ ಕ್ಲಬ್ ನಡೆಸುತ್ತಿದ್ದ ಮಹಿಳೆಯೋರ್ವರು, ತಮಗೆ ಕೋರ್ಟ್ ಆದೇಶವಿದ್ದು, ಪಾಲಿಕೆಯ ಅನುಮತಿಯ ಅಗತ್ಯವಿಲ್ಲ. ಕ್ಲಬ್ ಮುಚ್ಚುವುದಿಲ್ಲವೆಂದು ಅಬ್ಬರಿಸಿದ್ದರು. ಇದಕ್ಕೆ ದಿಟ್ಟ ಉತ್ತರ ನೀಡಿದ್ದ ಮೇಯರ್ ಬಳಿಕ ಪೊಲೀಸರ ಸಹಾಯದಿಂದ ಸ್ಕಿಲ್‌ಗೇಮ್ ಕ್ಲಬ್ ಅನ್ನು ಮುಚ್ಚಿಸಿ ಬೀಗ ಹಾಕಿಸಿದ್ದರು. ಆದರೆ ಮರುದಿನವೇ ಬೀಗ ಒಡೆದು, ಸ್ಕಿಲ್‌ಗೇಮ್ ಕ್ಲಬ್ ಪುನಃ ಪ್ರಾರಂಭಗೊಂಡಿದ್ದು, ಇದರ ವಿರುದ್ಧ ಪಾಲಿಕೆಯ ಆರೋಗ್ಯಾಧಿಕಾರಿ ಮಂಜಯ್ಯ ಶೆಟ್ಟಿ ಕ್ಲಬ್‌ನ ಮಾಲಕರ, ವ್ಯವಸ್ಥಾಪಕರ ಮತ್ತು ಸಿಬ್ಬಂದಿಯ ವಿರುದ್ಧ ಉದ್ದಿಮೆ ಪರವಾನಗಿ ಪಡೆಯದೆ, ಅಕ್ರಮ ಜೂಜಾಟ ನಡೆಸಿ ಹಣ ಗಳಿಸುತ್ತಿರುವ ಬಗ್ಗೆ ಹಾಗೂ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಕ್ಲಬ್ ವಿರುದ್ಧ ನಾನ್ ಬೇಲೇಬಲ್ ಸೆಕ್ಷನ್ 143, 147, 353, 448, 427,149ನಡಿ ಪ್ರಕರಣ ದಾಖಲಿಸಿದ್ದಾರೆ.







