ಬೋಪಣ್ಣಗೆ ಸೋಲು, ಭಾರತದ ಸವಾಲು ಅಂತ್ಯ

ಲಂಡನ್, ಜು.14: ಭಾರತದ ಸ್ಟಾರ್ ಆಟಗಾರ ರೋಹನ್ ಬೋಪಣ್ಣ ಹಾಗೂ ಅವರ ಕೆನಡಾದ ಜೊತೆಗಾರ್ತಿ ಗ್ಯಾಬ್ರಿಯೆಲಾ ಡಾಬ್ರೊಸ್ಕಿ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಶಿಪ್‌ನ ಮಿಶ್ರ ಡಬಲ್ಸ್ ಸ್ಪರ್ಧೆಯಿಂದ ಹೊರ ನಡೆದಿದ್ದಾರೆ. ಬೋಪಣ್ಣ ಸೋಲಿನೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ಇಲ್ಲಿ ಗುರುವಾರ ಎರಡು ಗಂಟೆಗಳ ಕಾಲ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 10ನೆ ಶ್ರೇಯಾಂಕದ ಇಂಡೊ-ಕೆನಡಾ ಜೋಡಿ ಬೋಪಣ್ಣ-ಡಾಬ್ರೊಸ್ಕಿ ಶ್ರೇಯಾಂಕರಹಿತ ಫಿನ್‌ಲ್ಯಾಂಡ್‌ನ ಹೆನ್ರಿ ಕಾಂಟಿನೆನ್ ಹಾಗೂ ಬ್ರಿಟನ್‌ನ ಹೀದರ್ ವ್ಯಾಟ್ಸನ್ ವಿರುದ್ಧ 7-6, 4-6, 5-7 ಸೆಟ್‌ಗಳಿಂದ ಸೋತಿದ್ದಾರೆ.
ಕಾಂಟಿನೆನ್ ಹಾಗೂ ವ್ಯಾಟ್ಸನ್ ಸೆಮಿ ಫೈನಲ್ ಸುತ್ತಿನಲ್ಲಿ ದ್ವಿತೀಯ ಶ್ರೇಯಾಂಕದ ಬ್ರೆಝಿಲ್‌ನ ಬ್ರುನೊ ಸೊರೆಸ್ ಹಾಗೂ ರಶ್ಯದ ಎಲೆನಾ ವೆಸ್ನಿನಾರನ್ನು ಎದುರಿಸಲಿದ್ದಾರೆ.
ಸೊರೆಸ್-ವೆಸ್ನಿನಾ ಜೋಡಿ 1 ಗಂಟೆ, 21 ನಿಮಿಷಗಳ ಕಾಲ ನಡೆದಿದ್ದ ಮತ್ತೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಶ್ರೇಯಾಂಕರಹಿತ ಜರ್ಮನಿಯ ಆ್ಯಂಡ್ರೆ ಬೆಗ್ಮಾನ್ ಹಾಗೂ ಅಮೆರಿಕದ ನಿಕೊಲ್ ಮೆಲಿಕಾರ್‌ರನ್ನು 7-5, 6-4 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
ಬೋಪಣ್ಣ ಹಾಗೂ ಡಾಬ್ರೊಸ್ಕಿ ಮೊದಲ ಸೆಟ್‌ನ್ನು 7-6 ಅಂತರದಿಂದ ಗೆಲ್ಲುವ ಮೂಲಕ ಉತ್ತಮ ಆರಂಭ ಪಡೆದಿದ್ದರು. ಆದರೆ, ಎರಡನೆ ಸೆಟ್‌ನ್ನು 6-4 ಅಂತರದಿಂದ ಜಯಿಸಿದ ಕಾಂಟಿನೆನ್ ಹಾಗೂ ವ್ಯಾಟ್ಸನ್ ತಿರುಗೇಟು ನೀಡಿದರು. ಮೂರನೆ ಸೆಟ್‌ನಲ್ಲಿ ತೀವ್ರ ಪೈಪೋಟಿ ಕಂಡು ಬಂದಿದ್ದು, ಒಂದು ಹಂತದಲ್ಲಿ 3-3 ರಿಂದ ಟೈ ಆಗಿತ್ತು. 7ನೆ ಗೇಮ್‌ನಲ್ಲಿ ಸರ್ವಿಸ್ ಬ್ರೇಕ್ ಪಡೆದ ಕಾಂಟಿನೆನ್-ವ್ಯಾಟ್ಸನ್ ಜೋಡಿ 4-3 ಮುನ್ನಡೆ ಪಡೆಯಿತು. ಮತ್ತೊಮ್ಮೆ ಸರ್ವಿಸ್ ಬ್ರೇಕ್‌ನ ಮೂಲಕ ಮುನ್ನಡೆಯನ್ನು 6-5ಕ್ಕೆ ವಿಸ್ತರಿಸಿದ ಕಾಂಟಿನೆನ್ ಅಂತಿಮವಾಗಿ 7-5 ಅಂತರದಿಂದ ಜಯ ಸಾಧಿಸಿ ಪಂದ್ಯವನ್ನು ಗೆದ್ದುಕೊಂಡಿತು.







