ತೊನ್ನು ಜಾಗೃತಿ ಅಭಿಯಾನ ಇಂದು ಉಡುಪಿಗೆ
ಉಡುಪಿ, ಜು.14: ತೊನ್ನು ರೋಗದ ಕುರಿತಂತೆ ಜನರಲ್ಲಿರುವ ಮಿಥ್ಯೆಯನ್ನು ಹೋಗಲಾಡಿಸಲು ಕಳೆದ ಜೂ.25ರಂದು ಬೆಂಗಳೂರಿನಿಂದ ಹೊರಟಿರುವ ‘ತೊನ್ನು ಸಂಚಾರಿ ಮಾಹಿತಿ ವಾಹಿನಿ’ ಇಂದು ಬೆಳಗ್ಗೆ ಮಣಿಪಾಲ, ಉಡುಪಿಗಳಿಗೆ ಆಗಮಿಸಲಿದೆ ಎಂದು ಉಡುಪಿ ಜಿಲ್ಲಾಸ್ಪತ್ರೆಯ ಚರ್ಮರೋಗ ತಜ್ಞ ಡಾ.ಸುಬಾಷ್ ಕಿಣಿ ಹೇಳಿದ್ದಾರೆ.
ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತೊನ್ನು ರೋಗದ ಕುರಿತು ಜನಜಾಗೃತಿಗಾಗಿ ಈ ಅಭಿಯಾನ ನಡೆದಿದ್ದು, ಬೆಳಗ್ಗೆ 9 ಗಂಟೆಗೆ ಮಣಿಪಾಲ ಕೆಎಂಸಿ, ಟೈಗರ್ ಸರ್ಕಲ್ ಮಾರ್ಗವಾಗಿ 10:30ಕ್ಕೆ ಉಡುಪಿ ಕ್ಲಾಕ್‌ಟವರ್‌ಗೆ ಆಗಮಿಸಲಿದೆ. ಅಲ್ಲಿಂದ ಅದು ಅಜ್ಜರಕಾಡಿನ ಜಿಲ್ಲಾಸ್ಪತ್ರೆ ಬಳಿ ಕೆಲಗಂಟೆ ಇದ್ದು ಮುಂದೆ ಮಂಗಳೂರಿಗೆ ತೆರಳಲಿದೆ ಎಂದರು.
ಅಭಿಯಾನದಲ್ಲಿರುವ ತಜ್ಞ ವೈದ್ಯರು ತೊನ್ನು ರೋಗದ ಕುರಿತು ಜನರ ಸಂಶಯಗಳನ್ನು ದೂರಗೊಳಿಸಲಿದ್ದಾರೆ. ತೊನ್ನುರೋಗದ ಕುರಿತ ಯಾವುದೇ ಪ್ರಶ್ನೆಗಳಿಗೆ ಅವರು ಉತ್ತರಿಸಲಿರುವುದಾಗಿ ಅವರು ತಿಳಿಸಿದರು. ತೊನ್ನು ರೋಗದ ನಿಯಂತ್ರಣ ಸಾಧ್ಯವಿದ್ದು, ಅದು ಸಾಂಕ್ರಾಮಿಕವಲ್ಲ ಎಂದರು.
ತೊನ್ನು ರೋಗ ಜನಜಾಗೃತಿ ಯಾತ್ರೆ ಈಗಾಗಲೇ 3,500ಕಿ.ಮೀ. ಕ್ರಮಿಸಿದ್ದು, 18 ಜಿಲ್ಲೆಗಳನ್ನು ಹಾದು ಬಂದಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೆಎಂಸಿಯ ಚರ್ಮರೋಗ ತಜ್ಞ ಡಾ.ಸತೀಶ್ ಪೈ, ಡಾ.ಸನತ್‌ರಾವ್ ಉಪಸ್ಥಿತರಿದ್ದರು.







