ಭಾರತದ ವಿದೇಶಿ ಸರಣಿಯಲ್ಲಿ ಮಾತ್ರ ಝಹೀರ್ ಲಭ್ಯ: ಬಿಸಿಸಿಐ

ಹೊಸದಿಲ್ಲಿ, ಜು.14: ಭಾರತ ಕ್ರಿಕೆಟ್ ತಂಡ ಸರಣಿಯನ್ನಾಡಲು ವಿದೇಶಕ್ಕೆ ತೆರಳಿದಾಗ ಮಾತ್ರ ಝಹೀರ್ ಖಾನ್ ಭಾರತ ತಂಡದ ಬೌಲಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಗುರುವಾರ ಸ್ಪಷ್ಟಪಡಿಸಿದೆ.
ರವಿ ಶಾಸ್ತ್ರಿ ಅವರನ್ನು ಭಾರತ ತಂಡದ ಹೊಸ ಕೋಚ್ ಆಗಿ ಆಯ್ಕೆ ಮಾಡಿರುವ ಕ್ರಿಕೆಟ್ ಸಲಹಾ ಸಮಿತಿಗೆ(ಸಿಎಸಿ)ಬಿಸಿಸಿಐ ಕೃತಜ್ಞತೆ ಸಲ್ಲಿಸಿದೆ.
ಸಿಎಸಿ ಶಾಸ್ತ್ರಿ ಅವರನ್ನು ಸಂಪರ್ಕಿಸಿದ ಬಳಿಕ ತಂಡದ ಅಗತ್ಯಕ್ಕೆ ಅನುಗುಣವಾಗಿ ಪ್ರತಿ ವಿದೇಶ ಪ್ರವಾಸಕ್ಕೆ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಲಹೆಗಾರರನ್ನು ನೇಮಕ ಮಾಡಲಿದೆ ಎಂದು ಬಿಸಿಸಿಐ ತಿಳಿಸಿದೆ.
ಸಿಎಸಿ ಝಹೀರ್ ಖಾನ್‌ರನ್ನು ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದ್ದರೂ ರವಿ ಶಾಸ್ತ್ರಿ ಭರತ್ ಅರುಣ್‌ರನ್ನು ಬೌಲಿಂಗ್ ಕೋಚ್‌ರನ್ನಾಗಿ ಆಯ್ಕೆ ಮಾಡಲು ಬಯಸಿದ್ದರು ಎಂಬ ವರದಿಯ ಬಳಿಕ ಬಿಸಿಸಿಐ ಈ ಪ್ರಕಟನೆ ತಿಳಿಸಿದೆ.
ಝಹೀರ್ ಹಾಗೂ ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಕೋಚ್ ಆಗಿರುವುದಕ್ಕೆ ಶಾಸ್ತ್ರಿಯವರ ಅಭ್ಯಂತರವಿಲ್ಲ. ಆದರೆ, ಪೂರ್ಣಕಾಲಿಕ ಕೋಚ್‌ರನ್ನು ತಾನೇ ಆಯ್ಕೆ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







