ನಾಳೆ ಭಾರತಕ್ಕೆ ನ್ಯೂಝಿಲೆಂಡ್ ವಿರುದ್ಧ ಮಾಡು-ಮಡಿ ಪಂದ್ಯ
ಮಹಿಳೆಯರ ಐಸಿಸಿ ವಿಶ್ವಕಪ್

ಲಂಡನ್, ಜು.14: ಮಹಿಳೆಯರ ಐಸಿಸಿ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕ ಹಾಗೂ ಆಸ್ಟ್ರೇಲಿಯ ವಿರುದ್ಧದ ಕಳೆದೆರಡು ಪಂದ್ಯಗಳಲ್ಲಿ ಸೋತಿರುವ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡದ ಸೆಮಿ ಫೈನಲ್ ಹಾದಿ ದುರ್ಗಮವಾಗಿದ್ದು, ಶನಿವಾರ ನ್ಯೂಝಿಲೆಂಡ್ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಈ ಪಂದ್ಯ ಕ್ವಾರ್ಟರ್ ಫೈನಲ್ ಸ್ವರೂಪ ಪಡೆದಿದೆ.
ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್, ಪಾಕಿಸ್ತಾನ, ವೆಸ್ಟ್‌ಇಂಡೀಸ್ ಹಾಗೂ ಶ್ರೀಲಂಕಾ ವಿರುದ್ಧ ಸತತ 4 ಪಂದ್ಯಗಳನ್ನು ಜಯಿಸಿದ್ಧ ಭಾರತದ ಗೆಲುವಿನ ಓಟಕ್ಕೆ ದಕ್ಷಿಣ ಆಫ್ರಿಕ ಬ್ರೇಕ್ ಹಾಕಿತ್ತು. ಬ್ರಿಸ್ಟೊಲ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 8 ವಿಕೆಟ್‌ಗಳಿಂದ ಸೋತಿರುವ ಭಾರತ ಹಿನ್ನಡೆ ಕಂಡಿದೆ.
ಶನಿವಾರ ನಡೆಯಲಿರುವ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಆತಿಥೇಯ ಇಂಗ್ಲೆಂಡ್, ದಕ್ಷಿಣ ಆಫ್ರಿಕ ಹಾಗೂ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಈಗಾಗಲೇ ಸೆಮಿ ಫೈನಲ್ ಸ್ಥಾನವನ್ನು ದೃಢಪಡಿಸಿವೆ.
ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಪೂನಂ ರಾವತ್ ಹೋರಾಟಕಾರಿ ಶತಕ ಹಾಗೂ ನಾಯಕಿ ಮಿಥಾಲಿ ರಾಜ್(69ರನ್) ದಾಖಲೆಯ ಅರ್ಧಶತಕದ ಹೊರತಾಗಿಯೂ ಎದುರಾಳಿ ತಂಡಕ್ಕೆ ದೊಡ್ಡ ಸವಾಲು ವಿಧಿಸಲು ವಿಫಲವಾಯಿತು. ಆಸೀಸ್ ವಿರುದ್ಧ ನಿಧಾನ ಬ್ಯಾಟಿಂಗ್‌ಗೆ ಒತ್ತು ನೀಡಿರುವುದು ದುಬಾರಿಯಾಗಿ ಪರಿಣಮಿಸಿತು. ಸ್ಮತಿ ಮಂಧಾನಾ ಬೇಗನೆ ಔಟಾದಾಗ ನಾಯಕಿ ರಾಜ್ ಹಾಗೂ ಪೂನಂ ಎಚ್ಚರಿಕೆಯ ಬ್ಯಾಟಿಂಗ್ ಮಾಡಿದರು.
69 ರನ್ ಗಳಿಸಲು 114 ಎಸೆತ ಎದುರಿಸಿದ್ದ ಮಿಥಾಲಿ ಏಕದಿನ ಕ್ರಿಕೆಟ್‌ನಲ್ಲಿ 6,000ಕ್ಕೂ ಅಧಿಕ ರನ್ ಗಳಿಸಿದ ವಿಶ್ವದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದರು.
ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್ ಜುಲನ್ ಗೋಸ್ವಾಮಿ ಟೂರ್ನಿಯಲ್ಲಿ ಈತನಕ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಸ್ಪಿನ್ನರ್‌ಗಳಾದ ದೀಪ್ತಿ, ಏಕ್ತಾ ಬಿಷ್ಟ್, ಹರ್ಮನ್‌ಪ್ರೀತ್ ಕೌರ್ ಹಾಗೂ ಪೂನಮ್ ರಾವತ್ ಬೌಲಿಂಗ್ ಜವಾಬ್ದಾರಿ ಹಂಚಿಕೊಂಡಿದ್ದಾರೆ.
ಭಾರತದಂತೆಯೇ ನ್ಯೂಝಿಲೆಂಡ್ ಕೂಡ ಮಾಡು-ಮಡಿ ಪರಿಸ್ಥಿತಿಯನ್ನು ಎದುರಿಸುತ್ತಿದೆೆ. 8 ಪಂದ್ಯಗಳಲ್ಲಿ 7 ಅಂಕ ಗಳಿಸಿರುವ ಕಿವೀಸ್ ಅಂಕಪಟ್ಟಿಯಲ್ಲಿ ಐದನೆ ಸ್ಥಾನದಲ್ಲಿದೆ. ನ್ಯೂಝಿಲೆಂಡ್ ಕಳೆದ ಪಂದ್ಯದಲ್ಲಿ ಇಂಗ್ಲೆಂಡ್‌ನ ವಿರುದ್ಧ 75 ರನ್ ಸೋತಿತ್ತು.







