ಶಾಲಾ ಕಾಲೇಜುಗಳಲ್ಲಿ ತುರ್ತು ಪರಿಸ್ಥಿತಿ ಹೇರುತ್ತಿರುವ ರಾಜ್ಯ ಸರಕಾರ: ಕ್ಯಾಂಪಸ್ ಫ್ರಂಟ್
ಮಂಗಳೂರು, ಜು. 14: ಶಾಲಾ-ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ಯಾವುದೇ ಸಭೆ, ಇನ್ನಿತರ ಚಟುವಟಿಕೆಗಳ ನಡೆಸುವಂತಿಲ್ಲ ಎಂಬ ರಾಜ್ಯ ಸರಕಾರ ತೆಗೆದುಕೊಂಡಿರುವ ತೀರ್ಮಾನವು ದೇಶದ ಪ್ರಜೆಗೆ ಹೇರುವ ಸಾಂವಿಧಾನಿಕ ಉಲ್ಲಂಘನೆಯಾಗಿದ್ದು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ತಫ್ಸೀರ್ ಇದನ್ನು ಖಂಡಿಸಿದ್ದಾರೆ.
ಪ್ರಜಾಪ್ರಭುತ್ವದ ಯಶಸ್ಸು ಜನರ ಸಹಭಾಗಿತ್ವದಲ್ಲಿ ಅಡಗಿದೆ. ಯಾವುದೇ ಒಕ್ಕೂಟ, ಸಂಘಟನೆಗಳು ತಮ್ಮ ಕಾರ್ಯ ಚಟುವಟಿಕೆಗಳ ಮೂಲಕ ಪ್ರಜಾಪ್ರಭುತ್ವದಲ್ಲಿ ಜನರನ್ನು ಸಹಭಾಗಿಗಳನ್ನಾಗಿಸುತ್ತದೆ. ಆದರೆ ಅಂತಹ ಚಟುವಟಿಕೆಗಳನ್ನೇ ಸರಕಾರ ನಿಯಂತ್ರಿಸಿದರೆ ಪ್ರಜಾ ಪ್ರಭುತ್ವದಲ್ಲಿ ಜನರ ಪಾಲ್ಗೊಳ್ಳುವಿಕೆ ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.
ಕಾರ್ಮಿಕರು, ಮಹಿಳೆಯರು ಸೇರಿದಂತೆ ದೇಶದಲ್ಲಿ ಎಲ್ಲಾ ಕ್ಷೇತ್ರದಲ್ಲೂ ಸಂಘಟನೆಗಳಿದ್ದು , ತಮ್ಮ ಸಮಸ್ಯೆಗಳನ್ನು ಸರಕಾರಕ್ಕೆ ತಲುಪಿಸುತ್ತಿವೆ ಮತ್ತು ಅದರ ಪರಿಹಾರಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ . ಅದೇ ರೀತಿ ದೇಶದ ಬಹುಮುಖ್ಯ ಕ್ಷೇತ್ರದಲ್ಲೊಂದಾದ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ವಿದ್ಯಾರ್ಥಿ ಸಮುದಾಯ ಕೂಡ ಸಂಘಟನೆಗಳನ್ನು ಕಟ್ಟಿದೆ. ಆದರೆ ಅಂತಹ ಚಟುವಟಿ ಕೆಗಳನ್ನು ಹೊಸ ಕಾನೂನುಗಳ ಮೂಲಕ ನಿಯಂತ್ರಿಸಲು ಹೊರಟ ಸರಕಾರದ ನಿರ್ಧಾರ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳ ಕ್ಯಾಂಪಸ್ ಗಳಲ್ಲಿ ತುರ್ತು ಪರಿಸ್ಥಿತಿ ಹೇರಿದಂತಿದೆ ಎಂದರು.
ಕೇಂದ್ರದ ಬಿ.ಜೆ.ಪಿ ಸರಕಾರದ ನಡೆಯನ್ನೇ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರ ಅನುಸರಿಸುತ್ತಿರುವುದನ್ನು ನೋಡುವಾಗ ಎರಡೂ ಪಕ್ಷಗಳಿಗೂ ಈ ದೇಶದ ಪ್ರಜಾಪಭುತ್ವವನ್ನು ಬಲಪಡಿಸುವ ಯಾವುದೇ ಉದ್ದೇಶ ಇದ್ದಂತಿಲ್ಲ ಎಂದು ಹೇಳಿದ್ದು, ವಿದ್ಯಾರ್ಥಿಗಳನ್ನು ಕೇವಲ ಕಾಲೇಜು, ತರಗತಿ ಹಾಗೂ ಪರೀಕ್ಷೆಗಳಿಗೆ ಸೀಮಿತವಾಗಿರಿಸಿ, ಬಂಡವಾಳಶಾಹಿ ಕಾರ್ಪೊರೇಟ್ ಕಂಪೆನಿಗಳ ಕೈಗೊಂಬೆಯಾಗಿ ದುಡಿಯಲು ಸರಕಾರ ಬಯಸುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.







