‘ಒಂದು ಮೊಟ್ಟೆಯ ಕಥೆ’ ಚಲನಚಿತ್ರ ತೆಲುಗು, ಮಲಯಾಳಂ, ಹಿಂದಿ, ಮರಾಠಿಗೆ ರಿಮೇಕ್

ಮಂಗಳೂರು, ಜು.15: ಕೇವಲ 9 ದಿನದ ಹಿಂದೆ ಬಿಡುಗಡೆಗೊಂಡ ‘ಒಂದು ಮೊಟ್ಟೆಯ ಕಥೆ’ ಚಲನಚಿತ್ರಕ್ಕೆ ಭಾರೀ ಸ್ಪಂದನೆ ಸಿಗುತ್ತಿದೆ. ತೆಲುಗು, ಮಲಯಾಳಂ, ಹಿಂದಿ, ಮರಾಠಿಗೆ ರಿಮೇಕ್ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಈ ಬಗ್ಗೆ ಚಿತ್ರದ ನಿರ್ಮಾಪಕ ಹಾಗು ಹಂಚಿಕೆದಾರ ಪವನ್‌ಕುಮಾರ್ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ನಿರ್ದೇಶಕ ಹಾಗು ಚಿತ್ರದ ನಾಯಕ ನಟ ರಾಜ್ ಬಿ.ಶೆಟ್ಟಿ ಹೇಳಿದರು.
ದ.ಕ.ಜಿಲ್ಲಾ ಪತ್ರಕರ್ತರ ಸಂಘವು ಶನಿವಾರ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ ‘ಮಾಧ್ಯಮ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 2 ವರ್ಷದ ಹಿಂದೆ ಚಿತ್ರದ ಬಗ್ಗೆ ಆಲೋಚಿಸುತ್ತಿರುವಾಗ ಇಷ್ಟೊಂದು ಪರಿಣಾಮ ಬೀರಬಹುದು ಎಂದು ಭಾವಿಸಿರಲಿಲ್ಲ. ಕಥೆಯೊಂದರ ಎಳೆಯನ್ನು ಮುಂದಿಟ್ಟು ಒಂದುವರೆ ತಿಂಗಳಲ್ಲಿ ಸಿನೆಮಾದ ಕಥೆ ಬರೆದು ಮುಗಿಸಿದೆ. ತಂಡಕ್ಕೆ 5 ಮಂದಿಯನ್ನು ಆಯ್ಕೆ ಮಾಡಲು 248 ಮಂದಿಯ ಸಂದರ್ಶನ ಮಾಡಲಾಯಿತು. 53 ಕಲಾವಿದರ ತಂಡಕ್ಕೆ 2 ತಿಂಗಳ ತರಬೇತಿ ಕೊಟ್ಟು 16 ದಿನಗಳಲ್ಲಿ ಚಿತ್ರೀಕರಣ ಮಾಡಿ ಮುಗಿಸಿದೆವು. ಇದಕ್ಕೆ 1 ಕೋ.ರೂ.ವ್ಯಯಿಸಲಾಗಿದೆ ಎಂದರು.
ನಾವು ಗುಣಮಟ್ಟಕ್ಕೆ ಆದ್ಯತೆ ನೀಡಿದೆವು. ಚಿತ್ರೀಕರಣದ ಬಳಿಕ ಹಂಚಿಕೆದಾರರ ಸಮಸ್ಯೆ ಎದುರಾಯಿತು. ಗೆಳೆಯರ ಸಹಾಯದಿಂದ ಅದಕ್ಕೆ ಪರಿಹಾರ ಸಿಕ್ಕಿತು. ಈಗ ಈ ಚಿತ್ರ ಬೆಳಗಾವಿ, ಹುಬ್ಬಳ್ಳಿ, ಮೈಸೂರು, ಮಂಡ್ಯ, ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿವೆ ಎಂದು ರಾಜ್ ಬಿ.ಶೆಟ್ಟಿ ಹೇಳಿದರು.
ಈ ಸಂದರ್ಭ ಮತ್ತೋರ್ವ ನಿರ್ಮಾಪಕ ಸುಹಾನ್ ಬಿ.ಪ್ರಸಾದ್, ನಟಿಯರಾದ ಶೈಲಾಶ್ರೀ ಮುಲ್ಕಿ, ಶ್ರೇಯಾ ಅಂಚನ್ ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಇಂದಾಜೆ ವಂದಿಸಿದರು.







