ಪ್ರಾದೇಶಿಕ ಭಾಷೆಗಳ ಉಳಿವಿಗಾಗಿ ರಾಜ್ಯಗಳ ಒಗ್ಗಟ್ಟಿಗೆ ಕರೆ

ಬೆಂಗಳೂರು, ಜು. 15: ಪ್ರಾದೇಶಿಕ ಭಾಷೆಯ ಉಳಿವಿಗಾಗಿ ಹಾಗೂ ರಾಜ್ಯಗಳ ಸ್ವಾಯತ್ತತೆ ಕಾಪಾಡಲು ವೈಮನಸ್ಸು ಬದಿಗಿಟ್ಟು ಎಲ್ಲಾ ರಾಜ್ಯಗಳು ಒಗ್ಗೂಡಬೇಕು ಎಂದು ಕನ್ನಡ ಪರ ಹೋರಾಟಗಾರರು, ಚಿಂತಕರು, ಸಾಹಿತಿಗಳು ಕರೆ ನೀಡಿದ್ದಾರೆ.
ಶನಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಭಾರತ ಒಕ್ಕೂಟದಲ್ಲಿ ಭಾಷಾ ಸಮಾನತೆಗೆ ಒತ್ತಾಯಿಸಿ ಹಾಗೂ ನಮ್ಮ ಮೆಟ್ರೋ ಹಿಂದಿ ಹೇರಿಕೆ ವಿರೋಧಿಸಿ ಹಮ್ಮಿಕೊಂಡಿದ್ದ ದುಂಡುಮೇಜಿನ ಸಭೆಯಲ್ಲಿ ಪ್ರಾದೇಶಿಕ ಭಾಷೆಗಳ ರಕ್ಷಣೆಗೆ ಒಗ್ಗಟಿನ ತಂತ್ರಕ್ಕೆ ಮಣೆ ಹಾಕಲಾಯಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಮಾತನಾಡಿ, ಹಿಂದಿ ವಿರುದ್ಧ ಹೋರಾಟ ಎಂದರೆ ರಾಜ್ಯದ ಮೇಲಿರುವ ಹಕ್ಕುಗಳ ಪ್ರಶ್ನೆ. ಹೀಗಾಗಿ, ಭಾಷೆ ಉಳಿವಿಗಾಗಿ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು. ಕೇಂದ್ರದಲ್ಲಿ ಯಾವುದೇ ಪಕ್ಷ ಸರಕಾರದ ಯಂತ್ರವನ್ನು ಮುನ್ನಡೆಸಲು ಬಂದಾಗ ಭಾಷೆ, ಧರ್ಮ, ಶಿಕ್ಷಣದ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಇತ್ತೀಚಿಗೆ ಬಂದಿರುವ ಏಕರೂಪ ತೆರಿಗೆ ಜಿಎಸ್‌ಟಿ ಜಾರಿಯಿಂದಲೂ ಜನರ ಆರ್ಥಿಕ ಹಕ್ಕು ಕಸಿದುಕೊಳ್ಳುವ ಹುನ್ನಾರ ಅಡಗಿದೆ ಎಂದು ಗಂಭೀರವಾಗಿ ಆರೋಪಿಸಿದರು. ಸಂವಿಧಾನದಲ್ಲಿ ಪ್ರತಿ ಭಾಷೆಗೂ ಒಂದೇ ಸ್ಥಾನ ನೀಡಲಾಗಿದೆ. ಎಲ್ಲಿಯೂ ಹಿಂದಿ ರಾಷ್ಟ್ರ ಭಾಷೆ ಎಂದಿಲ್ಲ. ಹೊಸ ತಂತ್ರಜ್ಞಾನದಿಂದಲೂ ಸ್ಥಳೀಯ ಭಾಷೆಗಳು ನಾಶ ಆಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಮಾತನಾಡಿ, ಭಾಷೆ ವಿಷಯದಲ್ಲಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳು ಒಂದಾಗಬೇಕು. ತಮಿಳುನಾಡು ಮಾದರಿಯಲ್ಲಿಯೇ ಕನ್ನಡ ಭಾಷಾ ಪ್ರೀತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯನಾರಾಯಣಗೌಡ ಮಾತನಾಡಿ, ಕೇಂದ್ರ ಸರಕಾರದ ಹಿಂದಿ ಹೇರಿಕೆ ವಿರುದ್ಧ ಹದಿನೇಳು ವರ್ಷಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ. ಅದೇ ರೀತಿ, ಈಗಾಗಲೇ, ಪ್ರಾದೇಶಿಕ ಭಾಷಾ ರಾಜ್ಯಗಳ ಮುಂಖಡರಿಗೆ ಪತ್ರ ಬರೆದು ಭಾಷಾ ಸಮಾನತೆಗಾಗಿ ಒತ್ತಾಯಿಸಿ ಹೋರಾಟ ರೂಪಿಸಲಾಗುವುದು ಎಂದು ಹೇಳಿದರು. ನಮ್ಮ ಮೆಟ್ರೋ ಎಂಬುದು ಬಿಎಂಟಿಸಿ ಇದ್ದ ಹಾಗೆಯೇ ಒಂದು ನಗರ ಸಾರಿಗೆ. ಅದು ಭಾರತೀಯ ರೈಲ್ವೆಗೆ ಸೇರಿದ ಸಂಸ್ಥೆಯಲ್ಲ ಎಂದ ಅವರು, ನಮ್ಮ ಮೆಟ್ರೋ ಯೋಜನೆಗೆ ರಾಜ್ಯ ಸರಕಾರ ಶ್ಯೂರಿಟಿ ನೀಡಿದೆ. ಹೀಗಾಗಿ, ಇದರಲ್ಲಿ ಅನಗತ್ಯ ಭಾಷೆ ಹೇರಿಕೆ ಸರಿಯಲ್ಲ ಎಂದು ತಿಳಿಸಿದರು.
ಸಭೆಯಲ್ಲಿ ಕೂಡಲ ಸಂಗಮದ ಪಂಚಮಶಾಲಿ ಗುರು ಪೀಠಾಧ್ಯಕ್ಷ ಬಸವಜಯ ಮೃತ್ಯುಂಜಯ ಸ್ವಾಮೀಜಿ, ದಲಿತ ಕವಿ ಡಾ.ಸಿದ್ದಲಿಂಗಯ್ಯ, ಮಾಜಿ ಸಭಾಪತಿ ವಿ.ಆರ್. ಸುದರ್ಶನ್, ಚಿಂತಕರಾದ ಸಿ.ಎಸ್.ದ್ವಾರಕಾನಾಥ್, ನಾಡೋಜ ಕಮಲಾ ಹಂಪನಾ, ನಟ ಚೇತನ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಇತರರು ಇದ್ದರು.







