ಎಚ್.ಎಸ್.ದೊರೆಸ್ವಾಮಿಗೆ ಪದ್ಮಶ್ರೀ ಪ್ರಶಸ್ತಿ ನೀಡಲು ಆಗ್ರಹ

ಬೆಂಗಳೂರು, ಜು.15: ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹಾಗೂ ಸಾಮಾಜ ಸೇವಕಿ ತೇಜಸ್ವಿನಿ ಅನಂತ್ ಕುಮಾರ್ ಅವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಇಬ್ಬರಿಗೂ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಪ್ರಗತಿಪರ ಚಿಂತನ ವಕೀಲರ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಒತ್ತಾಯಿಸಿವೆ.
ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ವಕೀಲರ ವೇದಿಕೆಯ ಅಧ್ಯಕ್ಷ ಬಿ.ಎಸ್. ಜ್ಞ್ಞಾನಪ್ರಕಾಶ್ ಮಾತನಾಡಿ, ಭೂ ರಹಿತರಿಗೆ ಭೂಮಿ ಒದಗಿಸಲು ದೊರೆಸ್ವಾಮಿ ಅವರು ನಡೆಸುತ್ತಿರುವ ಹೋರಾಟ ಅನನ್ಯ. ಸ್ವಾತಂತ್ರ ಚಳಚಳಿ, ಮಾನವ ಹಕ್ಕುಗಳ ರಕ್ಷಣೆಗೆ ನಡೆಸಿರುವ ಹೋರಾಟವನ್ನು ಪರಿಗಣಿಸಿ ದೊರೆಸ್ವಾಮಿ ಅವರಿಗೆ ಪದ್ಮಶ್ರೀ ಗೌರವ ಸಲ್ಲಿಸಬೇಕಿದೆ ಎಂದು ತಿಳಿಸಿದರು.
ಅದಮ್ಯ ಚೇತನ ಸಂಸ್ಥೆಯನ್ನು ಸ್ಥಾಪಿಸಿ ಸುಮಾರು 2 ಲಕ್ಷ ಮಕ್ಕಳಿಗೆ ಮಧ್ಯಾಹ್ನದ ರುಚಿ, ಶುಚಿ ಹಾಗೂ ಪೌಷ್ಠಿಕ ಬಿಸಿಯೂಟ ನೀಡಲು ಕಾರಣಕರ್ತರಾಗಿರುವ ಸಂಸ್ಥೆ ಅಧ್ಯಕ್ಷೆ ತೇಜಸ್ವಿನಿ ಅನಂತ್‌ಕುಮಾರ್ ಅವರ ಸೇವೆಯನ್ನು ಪರಿಗಣಿಸಿ ಮುಂಬರುವ ಸ್ವಾತಂತ್ರ ದಿನಾಚರಣೆಯಂದು ಈ ಇಬ್ಬರಿಗೂ ಪದ್ಮಶ್ರೀ ಆಗಲಿ ಅಥವಾ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕನ್ನಡ ಯುವಜನಸಂಘದ ಅಧ್ಯಕ್ಷ ಜಗದೀಶರೆಡ್ಡಿ, ಸಮತಾ ಮಹಿಳಾ ಕ್ಲಬ್‌ನ ಅಧ್ಯಕ್ಷೆ ಸುವರ್ಣ ಅಮರನಾಥ್ ಸೇರಿದಂತೆ ಇತರರು ಇದ್ದರು.





