ನಮ್ಮ ಮೆಟ್ರೋ ಬೋಗಿಗಳ ಸಂಖ್ಯೆ ದ್ವಿಗುಣಗೊಳಿಸಲು ಸಿಪಿಐ ಆಗ್ರಹ

ಬೆಂಗಳೂರು, ಜು. 15: ನಮ್ಮ ಮೆಟ್ರೋ ರೈಲು ಜನದಟ್ಟಣೆ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ಬೋಗಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸಬೇಕು. ಜನ ಸಂದಣಿ ಸಮಯದಲ್ಲಿ ರೈಲುಗಳ ಸಂಖ್ಯೆ ಹೆಚ್ಚಿಸಬೇಕು. ಅಂಗವಿಕಲರಿಗೆ, ಮಹಿಳೆಯರಿಗೆ ಪ್ರತ್ಯೇಕ ಬೋಗಿ ವ್ಯವಸ್ಥೆ ಕಲ್ಪಿಸಬೇಕೆಂದು ಸಿಪಿಐ ಆಗ್ರಹಿಸಿದೆ.
ರಿಯಾಯಿತಿ ದರದಲ್ಲಿ ಮಾಸಿಕ, ತ್ರೈಮಾಸಿಕ ಅವಧಿಗೆ ಪಾಸಿನ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ಬಿಎಂಟಿಸಿ ಮಾದರಿಯಲ್ಲಿ ಒದಗಿಸಬೇಕು. ಮೆಟ್ರೊ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ, ಮೆಟ್ರೊ ಸಿಬ್ಬಂದಿಗೆೆ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.
ಪ್ರಸ್ತುತ ಪ್ರಗತಿಯಲ್ಲಿರುವ ಮೆಟ್ರೋ ಯೋಜನೆ ಕಾಮಗಾರಿ ತ್ವರಿತಗತಿಯಲ್ಲಿ ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ಬೆಂಗಳೂರಿನ ಜನತೆಗೆ ಅನುಕೂಲ ಮಾಡಿಕೊಡಬೇಕು. ಮೇಲ್ಕಂಡ ಎಲ್ಲ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದರೆ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ಮಂಡಳಿ ಕಾರ್ಯದರ್ಶಿ ಹರಿಗೋವಿಂದ್ ಎಚ್ಚರಿಕೆ ನೀಡಿದ್ದಾರೆ.
Next Story





