ತತ್ಕಾಲ್ ಟಿಕೆಟ್ ಕಾದಿರಿಸುವಿಕೆ ನಿಯಮ ಬದಲಾಗಿಲ್ಲ : ರೈಲ್ವೇ ಸ್ಪಷ್ಟನೆ

ಹೊಸದಿಲ್ಲಿ, ಜು.15: ಜುಲೈ 1, 2017ರಿಂದ ರೈಲ್ವೇ ಟಿಕೆಟ್ ಮುಂಗಡ ಕಾದಿರಿಸುವ ನಿಯಮದಲ್ಲಿ (ತತ್ಕಾಲ್ ಸೇರಿದಂತೆ)ಬದಲಾವಣೆ ಆಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಕೆಲವು ವೆಬ್‌ಸೈಟ್‌ಗಳಲ್ಲಿ ಪ್ರಕಟವಾಗಿರುವ ಸುದ್ದಿಯ ಬಗ್ಗೆ ಸ್ಪಷ್ಟನೆ ನೀಡಿರುವ ರೈಲ್ವೇ ಇಲಾಖೆ, ನಿಯಮದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದೆ.
ಭಾರತೀಯ ರೈಲ್ವೇ ಇಲಾಖೆಯ ನಿಯಮಗಳಲ್ಲಿ ಕೆಲವು ಬದಲಾವಣೆಗಳಾಗಿವೆೆ ಹಾಗೂ ಹೊಸ ಸೌಲಭ್ಯಗಳನ್ನು ರೂಪಿಸಲಾಗಿದ್ದು ಇವು ಜುಲೈ 1ರಿಂದ ಜಾರಿಗೆ ಬರಲಿವೆ ಎಂದು ವಿವಿಧ ಸಾಮಾಜಿಕ ಮಾಧ್ಯಮಗಳು, ವಾಟ್ಸಾಪ್ ಗುಂಪುಗಳು ಮತ್ತು ಕೆಲವು ವೆಬ್‌ಸೈಟ್‌ಗಳಲ್ಲಿ ಪ್ರಸಾರವಾಗುತ್ತಿರುವ ವರದಿ ಆಧಾರರಹಿತ ಮತ್ತು ಸಂಪೂರ್ಣ ತಪ್ಪು ಸುದ್ದಿ ಎಂದು ರೈಲ್ವೇ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ತತ್ಕಾಲ್ ಮುಂಗಡ ಕಾದಿರಿಸುವಿಕೆ ಮತ್ತು ರದ್ದುಪಡಿಸುವಿಕೆ ಕುರಿತ ಹಾಲಿ ನಿಯಮವನ್ನು ಮತ್ತೊಮ್ಮೆ ಪ್ರಕಟಿಸಿದೆ.
ತತ್ಕಾಲ್ ಟಿಕೆಟ್ ಮುಂಗಡ ಕಾಯ್ದಿರಿಸುವವರಿಗೆ, ಎ.ಸಿ.ವರ್ಗದ ಟಿಕೆಟ್ ಬುಕ್ಕಿಂಗ್ ಸಮಯ ಬೆಳಿಗ್ಗೆ 10 ಗಂಟೆಗೆ ಆರಂಭವಾಗುತ್ತದೆ ಮತ್ತು ಎ.ಸಿ. ರಹಿತ ವರ್ಗದ ಟಿಕೆಟ್ ಬುಕ್ಕಿಂಗ್ ಸಮಯ ಬೆಳಿಗ್ಗೆ 11ಕ್ಕೆ ಆರಂಭವಾಗುತ್ತದೆ.(ಪ್ರಯಾಣದ ದಿನ ಹೊರತುಪಡಿಸಿ, ಒಂದು ದಿನ ಮುಂಚಿತವಾಗಿ). ಈ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಇದೇ ವ್ಯವಸ್ಥೆ ಮುಂದುವರಿಯುತ್ತದೆ .
ತತ್ಕಾಲ್ ಟಿಕೆಟ್‌ಗಳಿಗೆ ಅನ್ವಯವಾಗುವ ಮರುಪಾವತಿ ನಿಯಮದಲ್ಲೂ ಯಾವುದೇ ಬದಲಾವಣೆ ಇರುವುದಿಲ್ಲ. ಟಿಕೆಟ್ ಖಚಿತಗೊಂಡ (ಕನ್‌ಫರ್ಮ್) ಬಳಿಕ ಟಿಕೆಟ್ ರದ್ದುಗೊಳಿಸಿದರೆ ಯಾವುದೇ ಹಣ ಪಾವತಿ ಮಾಡಲಾಗುವುದಿಲ್ಲ. ಒಂದು ಪಿಎನ್‌ಆರ್(ಪ್ಯಾಸೆಂಜರ್ ನೇಮ್ ರೆಕಾರ್ಡ್)ನಲ್ಲಿ ಗರಿಷ್ಠ ನಾಲ್ಕು ಪ್ರಯಾಣಿಕರು ತತ್ಕಾಲ್-ಇ ಟಿಕೆಟ್ ಕಾಯ್ದಿರಿಸಬಹುದು. ಪ್ರಯಾಣಿಕರಿಗೆ ಸಾಮಾನ್ಯ ಟಿಕೆಟ್ ದರದ ಜೊತೆ ತತ್ಕಾಲ್ ಶುಲ್ಕ ವಿಧಿಸಲಾಗುತ್ತದೆ. 2014ರ ಅಕ್ಟೋಬರ್‌ನಿಂದ ಆಯ್ದ ಕೆಲವು ರೈಲುಗಳಲ್ಲಿ ‘ಪ್ರೀಮಿಯಂ ತತ್ಕಾಲ್ ’ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ ಎಂದು ರೈಲ್ವೇ ಇಲಾಖೆಯ ಪ್ರಕಟಣೆ ತಿಳಿಸಿದೆ.







