ಉಜ್ವಲ ಯೋಜನೆ: ರಾಷ್ಟ್ರಪತಿಯಿಂದ ಉಚಿತ ಎಲ್‌ಪಿಜಿ ಸಂಪರ್ಕ ವಿತರಣೆ

ಜಂಗಿಪುರ,ಜು.15: ಬಡ ಕುಟುಂಬಗಳ ಮಹಿಳೆಯರಿಗೆ ಐದು ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕಗಳನ್ನು ಒದಗಿಸುವ ಸರಕಾರದ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯು ಅರ್ಧ ದಾರಿಯನ್ನು ಕ್ರಮಿಸಿರುವ ಸಂಕೇತವಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಶನಿವಾರ ತನ್ನ ತವರೂರು, ಪಶ್ಚಿಮ ಬಂಗಾಳದ ಜಂಗಿಪುರದಲ್ಲಿ ಮಹಿಳೆಯೋರ್ವರಿಗೆ ಉಚಿತ ಎಲ್‌ಪಿಜಿ ಸಂಪರ್ಕವನ್ನು ಹಸ್ತಾಂತರಿಸಿದರು. ಇದರೊಂದಿಗೆ ಸರಕಾರವು ಕಳೆದ ವರ್ಷದ ಮೇ ತಿಂಗಳಲ್ಲಿ ಆರಂಭಿಸಿದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಈವರೆಗೆ ವಿತರಿಸಲಾದ ಉಚಿತ ಸಂಪರ್ಕಗಳ ಸಂಖ್ಯೆ 2.50 ಕೋಟಿಗೆ ತಲುಪಿತು.
ಮುಖರ್ಜಿಯವರು ತನ್ನ ನಿವಾಸ ‘ಜಂಗಿಪುರ ಹೌಸ್’ನಲ್ಲಿ ಈ ಎಲ್‌ಪಿಜಿ ಸಂಪರ್ಕ ವನ್ನು ಗೌರಿ ಸರ್ಕಾರ್ ಅವರಿಗೆ ವಿತರಿಸಿದರು.
ಕೇಂದ್ರ ತೈಲ ಸಚಿವ ಧಮೇಂದ್ರ ಪ್ರಧಾನ್ ಅವರೂ ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಜಂಗಿಪುರ, ರಘುನಾಥ ಗಂಜ್ ಮತ್ತು ಮುರ್ಷಿದಾಬಾದ್‌ಗಳ ಒಟ್ಟು 10 ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ಹಸ್ತಾಂತರಿಸಲಾಯಿತು.
ಕಳೆದ ಎಪ್ರಿಲ್‌ನಲ್ಲಿ ದೇಶದಲ್ಲಿ ಎಲ್‌ಪಿಜಿ ಬಳಸುತ್ತಿದ್ದ ಕುಟುಂಬಗಳ ಪ್ರಮಾಣ ಶೇ.72.8ರಷ್ಟಿದ್ದು, ಇದನ್ನು ಮಾರ್ಚ್ 2019ರ ವೇಳೆಗೆ ಶೇ.80ಕ್ಕೆ ಹೆಚ್ಚಿಸುವ ಗುರಿಯನ್ನು ಸರಕಾರವು ಹೊಂದಿದೆ.
ಬಿಪಿಎಲ್ ಕುಟುಂಬಗಳ ಮಹಿಳೆಯರಿಗೆ ಉಚಿತ ಎಲ್‌ಪಿಜಿ ಸಂಪರ್ಕವನ್ನು ಕಲ್ಪಿಸಲು 8,000 ಕೋ.ರೂ.ಗಳನ್ನು ಸರಕಾರವು ನಿಗದಿಗೊಳಿಸಿದೆ.







