ದೇಶದ ಸಂಗೀತ ವಿವಿಗಳಿಂದ ಒಬ್ಬ ಸಂಗೀತಗಾರ ತಯಾರಾಗಿಲ್ಲ: ರಾಜಶೇಖರ ಮನ್ಸೂರ್
ಬೆಂಗಳೂರು, ಜು.15: ದೇಶದಲ್ಲಿರುವ ಸಂಗೀತ ವಿಶ್ವವಿದ್ಯಾಲಯಗಳಲ್ಲಿ ಇಲ್ಲಿಯವರೆಗೂ ಒಬ್ಬನೇ ಒಬ್ಬ ಸಂಗೀತಗಾರ ತಯಾರಾಗಿಲ್ಲ ಎಂದು ಖ್ಯಾತ ಸಂಗೀತಗಾರ ಪಂಡಿತ್ ರಾಜಶೇಖರ ಮನ್ಸೂರ್ ಖೇದ ವ್ಯಕ್ತಪಡಿಸಿದರು.
ಶನಿವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ತಮ್ಮ ಅನುಭವಗಳನ್ನು ಬಿಚ್ಚಿಟ್ಟ ಅವರು, ಸಂಗೀತ ವಿಶ್ವವಿದ್ಯಾಲಯಗಳಿಂದ ಕೇಳುಗರು ತಯಾರಾಗಬಹುದೇ ವಿನಃ ಹಾಡುಗಾರರಲ್ಲ ಎಂದು ತಿಳಿಸಿದರು.
ಸಂಗೀತವನ್ನು ಗುರುಗಳಿಂದ ಕಲಿಯುವಂತಹದ್ದೆ ಹೊರತು ಕಾಲೇಜ್ ತರಗತಿಯಲ್ಲಲ್ಲ. ಗುರುಗಳು ಹಾಡುವುದನ್ನು ಕೇಳಿದರೆ ಶೇ.50ರಷ್ಟು ಸಂಗೀತದ ಪರಿಚಯವಾಗುತ್ತದೆ. ಹೀಗೆ ಕಿವಿಗೆ ಬಿದ್ದ ಸಂಗೀತದ ರಾಗ ಸ್ವರಗಳ ಕುರಿತು ಚಿಂತಿಸಬೇಕು. ತದನಂತರ ತನ್ನದೇ ಶೈಲಿನಲ್ಲಿ ಹಾಡಲು ಪ್ರಾರಂಭಿಸಬೇಕು. ಹೀಗೆ ನಿರಂತರವಾದ ಅಭ್ಯಾಸದಿಂದ ಸಂಗೀತವನ್ನು ಒಲಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ನನ್ನ ಅಭ್ಯಾಸ: ನಾನು ತೊಟ್ಟಿಲಿನಲ್ಲಿ ಅಮ್ಮನ ಲಾಲಿ ಹಾಡನ್ನು ಕೇಳಲಿಲ್ಲ. ಅಪ್ಪನ ಸಂಗೀತವೇ ಲಾಲಿ ಹಾಡಾಗಿತ್ತು. ಹೀಗೆ ಚಿಕ್ಕಂದಿನಲ್ಲಿ ಅಪ್ಪನ ಸಂಗೀತ ಹಾಗೂ ಮನೆಯಲ್ಲಿದ್ದ ಸಂಗೀತದ ಪರಿಕರಗಳ ಜೊತೆ ನಿರಂತರವಾಗಿ ಬೆರೆತೆ. ಇಂತಹ ಮನೆಯ ವಾತಾವರಣದಿಂದಾಗಿ ಸಂಗೀತ ಸುಲಭವಾಗಿ ಒಲಿದು ಬಂತು ಎಂದು ಅವರು ಹೇಳಿದರು.
ಸ್ವರ-ಶೃತಿ ನಂಬುವುದಿಲ್ಲ: ಸಂಗೀತದಲ್ಲಿ 7 ಸ್ವರ, 22 ಶೃತಿಗಳಿವೆ ಎಂಬುದನ್ನು ನಾನು ನಂಬುವುದಿಲ್ಲ. ಇದರ ಬದಲಿಗೆ ನೂರಾರು ರಾಗ ಸ್ವರಗಳಿರುವುದನ್ನು ನಾನು ಖಾತ್ರಿ ಪಡಿಸುತ್ತೇನೆ. ರಾಗದ ಸ್ವರಗಳನ್ನು ತಮ್ಮದೇ ಶೈಲಿಯಲ್ಲಿ ಬೇರೆ, ಬೇರೆ ರೂಪದಲ್ಲಿ ಹಾಡಬಹುದಾಗಿದೆ. ಅದು ಸ್ವಂತಿಕೆಯಿದ್ದವರಿಗೆ ಮಾತ್ರ ಲಭಿಸುವಂತಹದ್ದೆಂದು ಅವರು ತಿಳಿಸಿದರು.
ಕೇವಲ ಒಂದು-ಎರಡು ವರ್ಷಗಳಲ್ಲಿ ಸಂಗೀತ ಸಿದ್ಧಿಸುವುದಿಲ್ಲ. ಒಂದೊಂದು ಸ್ವರವನ್ನು ದೈನ್ಯತೆಯಿಂದ ಓಲೈಕೆ ಮಾಡಬೇಕಾಗುತ್ತದೆ. ಅಭ್ಯಾಸ ಮಾಡಿದಷ್ಟು ಹೊಸ ಹೊಸ ರೂಪದಲ್ಲಿ ಸ್ವರಗಳು ಮೂಡಿಬರುತ್ತದೆ. ಹೀಗಾಗಿ ನಾನಿನ್ನು ಸಂಗೀತವನ್ನು ವಿದ್ಯಾರ್ಥಿಯಂತೆ ಅಭ್ಯಾಸ ಮಾಡುತ್ತಿದ್ದೇನೆ. ಕಲಿಯುವುದು ಇನ್ನೂ ಸಾಕಷ್ಟು ಇದೆ ಎಂದು ಅವರು ಹೇಳಿದರು.
ಟಿವಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಲ್ಲಿ ಮಕ್ಕಳಿಗೆ ಸಂಗೀತ ಸ್ಪರ್ಧೆಯನ್ನು ಏರ್ಪಡಿಸುವುದರಿಂದ ಸಂಗೀತವನ್ನು ಕಲಿಸುವುದಕ್ಕೆ ಸಾಧ್ಯವಿಲ್ಲ. ಇದರಿಂದ ಮಕ್ಕಳಲ್ಲಿರುವ ಸಂಗೀತದ ಆಸಕ್ತಿಯೂ ಕಡಿಮೆಯಾಗಲಿದೆ ರಾಜಶೇಖರ ಮನ್ಸೂರ್ ತಿಳಿಸಿದರು.







