ಕೇರಳ ಮಾದರಿ ನಮಗೆ ಅಗತ್ಯವಿಲ್ಲ: ಡಾ.ಜಿ.ಪರಮೇಶ್ವರ್

ಬೆಂಗಳೂರು, ಜು.15: ಕರ್ನಾಟಕಕ್ಕೆ ‘ಕರ್ನಾಟಕ ಮಾದರಿ’ಯೇ ಸಾಕು. ಕೇರಳ ಮಾದರಿಯನ್ನು ತರುವ ಅಗತ್ಯವೇನಿಲ್ಲ ಎಂದು ಬಿಜೆಪಿ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ.
ಶನಿವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇರಳ ಮಾದರಿಯ ದ್ವೇಷದ ರಾಜಕಾರಣವನ್ನು ನಮ್ಮ ರಾಜ್ಯದಲ್ಲಿ ತರಲಾಗುತ್ತಿದೆ ಎಂದು ಬಿಜೆಪಿ ಮುಖಂಡರಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಸದಾನಂದಗೌಡ ನೀಡಿರುವ ಹೇಳಿಕೆಗೆ ಅವರು ಈ ಮೇಲಿನಂತೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಕೋಮುವಾದ ಸೃಷ್ಟಿಸುವ ಅಗತ್ಯ ನಮಗಿಲ್ಲ. ಬಿಜೆಪಿ ಮುಖಂಡರು ಪ್ರಚೋದನಕಾರಿ ಭಾಷಣ ಮಾಡುವುದನ್ನು ನಿಲ್ಲಿಸಿದರೆ ಸಾಕು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ನೆಲೆಸುತ್ತದೆ. ಮುಸ್ಲಿಂ ಸಂಘಟನೆಗಳ ಮುಖಂಡರು ಪ್ರಚೋದನಕಾರಿ ಭಾಷಣಗಳನ್ನು ಮಾಡುವುದು ಬೇಡ. ಪೊಲೀಸ್ ಇಲಾಖೆಗೆ ಜವಾಬ್ದಾರಿ ವಹಿಸೋಣ, ಕಾನೂನು ಎಲ್ಲವನ್ನೂ ನೋಡಿಕೊಳ್ಳುತ್ತದೆ ಎಂದು ಅವರು ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಎಲ್ಲಿಯೂ ಪ್ರಚೋದನಕಾರಿ ಭಾಷಣ ಮಾಡಿಲ್ಲ. ಶಾಲಾ, ಕಾಲೇಜುಗಳಲ್ಲಿ ಆರೆಸೆಸ್ಸ್ ಜೊತೆ ಗುರುತಿಸಿಕೊಂಡಿರುವ ಶಿಕ್ಷಕರನ್ನು ಗುರುತಿಸುವಂತೆ ಯಾವ ಸೂಚನೆಯನ್ನು ಅವರು ನೀಡಿಲ್ಲ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು.
171 ಪದಾಧಿಕಾರಿಗಳು: ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿಗೆ 171 ನೂತನ ಪದಾಧಿಕಾರಿಗಳನ್ನು ನೇಮಿಸಿದೆ. ಈ ಪಟ್ಟಿ ದೊಡ್ಡದಾಯ್ತು ಅಂತ ನನಗೂ ಅನ್ನಿಸುತ್ತಿದೆ. ಆದರೂ, ಚುನಾವಣೆ ಸಂದರ್ಭದಲ್ಲಿ ಇಂತಹ ಪಟ್ಟಿ ಬೇಕಾಗುತ್ತದೆ. 33 ಮಹಿಳೆಯರಿಗೆ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಸಿಕ್ಕಿರುವುದು ದಾಖಲೆಯಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷ ಕೆಲ ರಣತಂತ್ರಗಳನ್ನು ರೂಪಿಸಿದೆ. ಯುವಕರಿಗೆ, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. 17 ಉಪಾಧ್ಯಕ್ಷರು, 57 ಪ್ರಧಾನ ಕಾರ್ಯದರ್ಶಿ, 96 ಕಾರ್ಯದರ್ಶಿಗಳನ್ನು ಎಐಸಿಸಿ ವರಿಷ್ಠರು ನೇಮಕ ಮಾಡಿದ್ದಾರೆ. 40 ವರ್ಷದೊಳಗಿನ 19 ಮಂದಿ ಪದಾಧಿಕಾರಿಗಳಿದ್ದಾರೆ ಎಂದು ಅವರು ಹೇಳಿದರು.
ಪದಾಧಿಕಾರಿಗಳ ಆಯ್ಕೆಯಲ್ಲಿ ಎಲ್ಲ ವಿಭಾಗ, ಸಮುದಾಯಗಳಿಗೂ ಅವಕಾಶ ನೀಡಲಾಗಿದೆ. ಪಟ್ಟಿ ಬಗ್ಗೆ ಯಾವುದೇ ಭಿನ್ನಾಭಿಪ್ರಾಯ, ಅಸಮಾಧಾನ ಇಲ್ಲ. ಸಂಸದ ಕೆ.ಎಚ್.ಮುನಿಯಪ್ಪ ಕೂಡ ಅಪಸ್ವರ ಎತ್ತಿಲ್ಲ. ಅತೃಪ್ತ ಕೆಲ ಶಾಸಕರು ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿಯನ್ನು ಭೇಟಿ ಮಾಡಲು ಮುಂದಾಗಿರುವುದು ನನಗೆ ಗೊತ್ತಿಲ್ಲ ಎಂದು ಪರಮೇಶ್ವರ್ ತಿಳಿಸಿದರು. ಇದೇ ದೊಡ್ಡ ಪಟ್ಟಿ, ಮತ್ತೊಂದು ಪಟ್ಟಿ ಬೇಕಾದರೆ ಹೈಕಮಾಂಡ್ ಬಿಡುಗಡೆ ಮಾಡಲಿ. ಶಾಸಕ ಎಸ್.ಟಿ.ಸೋಮಶೇಖರ್, ಪದಾಧಿಕಾರಿಗಳ ಪಟ್ಟಿ ಕುರಿತು ನನ್ನೊಂದಿಗೆ ಯಾವ ಮಾತುಕತೆಯನ್ನು ನಡೆಸಿಲ್ಲ. ಅವರು ವರಿಷ್ಠರನ್ನು ಭೇಟಿ ಮಾಡಲು ತೆರಳುತ್ತಿರುವುದಾಗಿ ಹೇಳಿದರೆ, ನಾನೇ ವ್ಯವಸ್ಥೆ ಮಾಡಿ ಕಳುಹಿಸಿಕೊಡುತ್ತೇನೆ ಎಂದು ಅವರು ಹೇಳಿದರು.
ಯುಪಿಎ ಸರಕಾರದ ಅಧಿಕಾರವಧಿಯಲ್ಲಿ ಸಂವಿಧಾನದ ಕಲಂ 371(ಜೆ) ಅಡಿಯಲ್ಲಿ ಹೈದರಾಬಾದ್-ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ 4ರಂದು ರಾಯಚೂರಿನಲ್ಲಿ ಪಕ್ಷದ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ರಾಹುಲ್‌ಗಾಂಧಿ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರು ಹೊರತುಪಡಿಸಿ ಇತರ ಜಿಲ್ಲೆಗಳಲ್ಲಿ ಸಮಾವೇಶಗಳನ್ನು ಆಯೋಜಿಸಲು ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.
ಅಭ್ಯರ್ಥಿಗಳ ಆಯ್ಕೆಗೆ ಸಮೀಕ್ಷೆ : ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸಮೀಕ್ಷೆ ನಡೆಸಲಾಗುತ್ತಿದೆ. ಕೇವಲ ಸಮೀಕ್ಷೆಯ ಆಧಾರದಲ್ಲಿ ಮಾತ್ರ ಟಿಕೆಟ್ ನೀಡುವುದಿಲ್ಲ. ಇನ್ನಿತರ ಮಾನದಂಡಗಳ ಪ್ರಕಾರ ಟಿಕೆಟ್ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ ಉಪಸ್ಥಿತರಿದ್ದರು.







