ಶಿರಾಲಿ ಜನತಾವಿದ್ಯಾಲಯ ಶಾಲೆಯಲ್ಲಿ ಧ್ಯಾನ ಮತ್ತು ಯೋಗ ಶಿಬಿರ
ಭಟ್ಕಳ,ಜು.15: ಧ್ಯಾನದಿಂದ ಜೀವನದಲ್ಲಿ ಮಹತ್ತರ ಬದಲಾವಣೆಯನ್ನು ಕಾಣಬಹುದು, ಅತ್ಯಂತ ಶಾಂತಚಿತ್ತರಾಗಿ ಧ್ಯಾನ ಕೈಗೊಂಡಾಗ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ಶಿರಾಲಿಯ ಸಮಾಜ ಸೇವಕ ಡಾ. ಆರ್. ವಿ. ಸರಾಫ್ ಹೇಳಿದರು.
ಅವರು ಶಿರಾಲಿಯ ಜನತಾ ವಿದ್ಯಾಲಯ ಪ್ರೌಢ ಶಾಲೆಯಲ್ಲಿ ಎರ್ಪಡಿಸಲಾಗಿದ್ದ 2016-17ನೇ ಸಾಲಿನ ಧ್ಯಾನ ಮತ್ತು ಯೋಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡುತ್ತಿದ್ದರು.
ಪ್ರತಿಯೊಂದು ವಿದ್ಯಾರ್ಥಿಗೂ ಕೂಡಾ ಧ್ಯಾನ, ಯೋಗದಿಂದ ಮನಸ್ಸಿನ ಎಕಾಗ್ರತೆ ದೊರೆತು ವಿದ್ಯಾಭ್ಯಾಸದಲ್ಲಿಯೂ ಅದು ಅತ್ಯಂತ ಸಹಕಾರಿಯಾಗುವುದು. ಅಲ್ಲದೇ ಜೀವನದಲ್ಲಿ ಎಂತಹ ಕಠಿಣ ಪರಿಸ್ಥಿತಿ ಬಂದರೂ ಸಹ ಅದನ್ನು ಎದುರಿಸುವಂತಹ ಧೈರ್ಯ ಬರುವುದು. ಜೀವನದಲ್ಲಿ ಎಲ್ಲವೂ ಇದ್ದು ಮಾನಸಿಕ ಶಾಂತಿಯೇ ಇಲ್ಲವಾದಲ್ಲಿ ಎಲ್ಲವೂ ಗೌಣವಾಗುವುದು. ಧ್ಯಾನ, ಯೋಗವನ್ನು ಜೀವನದಲ್ಲಿ ಅಳವಡಿಸಿಕೊಂಡು ಶಾಂತಿಯಿಂದ ಜೀವನ ನಡೆಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನತಾ ವಿದ್ಯಾಲಯ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಂ. ಎ. ನಾಯ್ಕ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಯೋಗ ಗುರು ಗೋವಿಂದ ದೇವಡಿಗ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಕಲಿತ ವಿದ್ಯೆಯು ಜೀವನ ಶಿಕ್ಷಣವಾಗುವುದು. ಮುಂದೆ ತಮ್ಮ ಜೀವನದಲ್ಲಿ ಅದು ಅತ್ಯಂತ ಸಹಕಾರಿ. ಪ್ರೌಢ ಶಾಲಾ ಹಂತದಲ್ಲಿಯೇ ಧ್ಯಾನ, ಯೋಗವನ್ನು ಮಾಡುವುದರಿಂದ ಮನಸ್ಸಿನ ಎಕಾಗ್ರತೆ ಹೆಚ್ಚಿ ವಿದ್ಯಾಭ್ಯಾಸಕ್ಕೆ ಅತ್ಯಂತ ಸಹಕಾರಿಯಾಗುವುದು. ದೊರೆತಿರುವ ಅವಕಾಶವನ್ನು ಬಳಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ನಮ್ಮ ಶಿಕ್ಷಣ ಪದ್ಧತಿಯಲ್ಲಿ ಜೀವನ ಶಿಕ್ಷಣದ ಕಡೆಗೆ ಗಮನವನ್ನೇ ನೀಡಿಲ್ಲ. ಇಂದಿನ ವಿದ್ಯಾರ್ಥಿಗಳು ಮುಂದೆ ಸಮಾಜದಲ್ಲಿ ಎದುರಿಸಬೇಕಾದ ಸುಖ-ಕಷ್ಟಗಳ ಕುರಿತು ಅರಿಯದೇ ಇರುವುದರಿಂದ ಅನೇಕರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅದು ನಮ್ಮ ಶಿಕ್ಷಣವಾಗಬೇಕು, ಶಿಕ್ಷಣ ಪದ್ಧತಿ ಬದಲಾದಾಗ ಮಾತ್ರ ವಿದ್ಯಾರ್ಥಿ ಮುಂದೆ ಯಶಸ್ವೀ ನಾಗರೀಕನಾಗಬಲ್ಲ. ಯೋಗ ಶಿಕ್ಷಣದಲ್ಲಿ ಕಡ್ಡಾಯ ಗೊಳಿಸಿದಾಗ ಮಾತ್ರ ನಾವು ಮುಂದಿನ ಸಮಾಜವನ್ನು ಸದೃಢ ಸಮಾಜವನ್ನಾಗಿ ನೋಡಲು ಸಾಧ್ಯವಾಗುವುದು ಎಂದರು.
ಸಾನಿಯಾ ಮತ್ತು ದೀಕ್ಷಾ ಪ್ರಾರ್ಥನೆ ಹಾಡಿದರು. ಶಿಕ್ಷಕಿ ಸುಕನ್ಯಾ ಭಟ್ಟ ಸ್ವಾಗತಿಸಿದರು. ಶಿಕ್ಷಕಿ ಲೀಲಾವತಿ ಮೊಗೇರ ನಿರ್ವಹಿಸಿದರು. ಶಿಕ್ಷಕಿ ಆಶಾ ಭಟ್ಟ ವಂದಿಸಿದರು.







