198 ವಾರ್ಡ್‌ಗಳಲ್ಲಿ ಡೆಂಗ್ ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮ: ಪದ್ಮಾವತಿ
ಬೆಂಗಳೂರು, ಜು.15: ನಗರದ 198 ವಾರ್ಡ್‌ಗಳಲ್ಲಿ ಡೆಂಗ್ ಮತ್ತು ಚಿಕೂನ್ ಗುನ್ಯಾ ರೋಗಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಮೇಯರ್ ಪದ್ಮಾವತಿ ತಿಳಿಸಿದ್ದಾರೆ.
ಶನಿವಾರ ಡೆಂಗ್ ಹಾಗೂ ಚಿಕೂನ್ ಗುನ್ಯಾ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಬೃಹತ್ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಅವರು, ನಗರದಲ್ಲಿ ಈವರೆಗೆ 1981 ಡೆಂಗ್ ಮತ್ತು ಚಿಕೂನ್ ಗುನ್ಯಾ ರೋಗಗಳ ಪಾಸಿಟೀವ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದರು.
ಡೆಂಗ್ ಮತ್ತು ಚಿಕೂನ್ ಗುನ್ಯಾ ರೋಗಗಳ ಪಾಸಿಟೀವ್ ಮತ್ತು ನೆಗೆಟೀವ್ ಪ್ರಕರಣಗಳನ್ನು ಕಡ್ಡಾಯವಾಗಿ ಪಾಲಿಕೆಗೆ ವಿವರ ಸಲ್ಲಿಸಬೇಕು. ಈವರೆಗೆ ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಅಧಿಕೃತವಾಗಿ ಸಾವಿನ ಬಗ್ಗೆ ವರದಿಯಾಗಿಲ್ಲ. ಈ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಶಾಲಾ ಮಕ್ಕಳಿಂದ ಬೃಹತ್ ಜಾಥಾ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಮಾತನಾಡಿ, ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಡೆಂಗ್ ಮತ್ತು ಚಿಕೂನ್ ಗುನ್ಯಾ ದಿನ ನಿತ್ಯದ ಪ್ರಕರಣ ವರದಿಗಳನ್ನು ಪಾಲಿಕೆಗೆ ನೀಡುವಂತೆ ಆದೇಶಿಸಿದ್ದು, ಒಂದು ವೇಳೆ ಯಾವುದೇ ಪ್ರಕರಣಗಳು ಇಲ್ಲದಿದ್ದ ಪಕ್ಷದಲ್ಲಿ ಇಲ್ಲ ಎಂದಾದರೂ ಮಾಹಿತಿಯನ್ನು ನೀಡಬೇಕು ಎಂದು ತಿಳಿಸಿದರು. ಡೆಂಗ್ ರೋಗ ದೃಢಪಟ್ಟ ರೋಗಿಯ ವಿಳಾಸವನ್ನು ಪತ್ತೆ ಹಚ್ಚಿ ಪೂರ್ಣ ಚಿಕಿತ್ಸೆ ನೀಡುವುದರೊಂದಿಗೆ ಕುಟುಂಬದ ಸದಸ್ಯರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುವುದು. ಅಲ್ಲದೇ, ಆ ಪ್ರದೇಶದಲ್ಲಿ ಜ್ವರ ಸಮೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ನೀಡಲಾಗುವುದು, ಡೆಂಗ್ ರೋಗ ಇದ್ದಕಡೆ ಲಾರ್ವಾ ಸರ್ವೆ ಕಾರ್ಯ ನಡೆಸಿ, ಕೀಟನಾಶಕ ಸಿಂಪಡಣೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ನಗರದಲ್ಲಿ ಡೆಂಗ್ ಮತ್ತು ಚಿಕೂನ್ ಗುನ್ಯಾ ರೋಗಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಆರು ಮೊಬೈಲ್ ಯುನಿಟ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಇವು ಕೊಳಚೆ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸಲಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಣವನ್ನು ತೆಗೆದಿರಿಸಲಾಗಿದೆ. ಅಲ್ಲದೆ, ಡೆಂಗ್ ರೋಗ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮೊಬೈಲ್ ಘಟಕಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದೆಂದು ಅವರು ಮಾಹಿತಿ ನೀಡಿದರು.







