ಚರಂಡಿ ಅವ್ಯವಸ್ಥೆ : ಬಿ.ಸಿ.ರೋಡಿನಲ್ಲಿ ಬಸ್ ಪ್ರಯಾಣಿಕರಿಗೆ ಸಂಕಷ್ಟ

ಬಂಟ್ವಾಳ, ಜು. 15: ಧಾರಾಕಾರ ಮಳೆಗೆ ಬಿ.ಸಿ.ರೋಡಿನಲ್ಲಿ ಪ್ರಯಾಣಿಕರು ಬಸ್ ಕಾಯಲು ನಿಲ್ಲುವ ಪ್ರದೇಶ ಜಲಾವೃತಗೊಂಡ ಪರಿಣಾಮ ಪ್ರಯಾಣಿಕರು ಪರದಾಡಿದ ಘಟನೆ ಶನಿವಾರ ಬೆಳಗ್ಗೆ ನಡೆಯಿತು.
ಬಿ.ಸಿ.ರೋಡ್ ಹಳೆ ತಾಲೂಕು ಕಚೇರಿಯ ಬಳಿಯ ಬಿ.ಸಿ.ರೋಡಿನಿಂದ ಮಂಗಳೂರಿಗೆ ಸಂಚಾರಿಸುವ ಬಸ್‍ಗಳು ತಂಗುವ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಶನಿವಾರ ಬೆಳಗ್ಗೆಯಿಂದ ಬಿ.ಸಿ.ರೋಡ್ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿದಿದ್ದು ಮಳೆ ನೀರು ಸರಿಯಾಗಿ ಹರಿಯಲು ಚರಂಡಿ ವ್ಯವಸ್ಥೆ ಇಲ್ಲದ ಪರಿಣಾಮ ಈ ದುಸ್ಥಿತಿ ಉಂಟಾಗಿದೆ.
ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಬಿ.ಸಿ.ರೋಡಿನಲ್ಲಿ ಒಂದೆಡೆ ಬಸ್ ನಿಲ್ದಾಣವಿಲ್ಲದ ಕಾರಣ ಪ್ರಯಾಣಿಕರು ಮಳೆಯಲ್ಲೇ ಕಾಯುವ ಸ್ಥಿತಿ ಇದೆ. ಇನ್ನೊಂದೆಡೆ ಬಸ್‍ಗಾಗಿ ನಿಲ್ಲುವ ಜಾಗದಲ್ಲಿ ಕೆರೆ ಮಾದರಿಯಲ್ಲಿ ನೀರು ತುಂಬಿದ್ದರಿಂದ ಪ್ರಯಾಣಿಕರು ನೀರಿನಲ್ಲೇ ನಿಂತು ಬಸ್ ಕಾಯುವ, ಹತ್ತುವ ದೃಶ್ಯಗಳು ಕಂಡು ಬಂದವು.
ಮಳೆಗಾಲದ ಮೊದಲೇ ಇಲ್ಲಿನ ಚರಂಡಿಗಳ ದುರಸ್ಥಿ ಕಾರ್ಯ ಆರಂಭಗೊಂಡಿದ್ದರೂ ಈವರೆಗೆ ಕಾಮಗಾರಿ ಪೂರ್ಣಗೊಳ್ಳದೆ ನೆನೆಗುದಿಗೆ ಬಿದ್ದಿದೆ. ಸಾಧಾರಣ ಮಳೆಯಾದರೆ ಮಳೆ ನೀರು ಎಲ್ಲೆಂದರಲ್ಲಿ ಹರಿದು ಹೋಗುತ್ತದೆ. ಆದರೆ ಧಾರಾಕಾರ ಮಳೆ ಸುರಿದಾಗ ರಸ್ತೆ ಬದಿಯಲ್ಲಿ ಕೃತಕ ನೆರೆ ಉಂಟಾಗುತ್ತದೆ. ಪಾದದಿಂದ ಮೊನಕಾಲಿನವರೆ ತುಂಬಿರುವ ನೀರಿನಲ್ಲೇ ಸಾರ್ವಜನಿಕರು ನಡೆದಾಡಬೇಕಿದೆ.
ಇದೇ ರಸ್ತೆಯಾಗಿ ಜನಪ್ರತಿನಿಧಿಗಳು ಸಂಚಾರಿಸುತ್ತಾರೆ. ನೀರಿನಲ್ಲಿ ನಿಂತು ಬಸ್ ಕಾಯುವ ಜನಸಾಮಾನ್ಯರ ಸ್ಥಿತಿ ನೋಡಿಕೊಂಡು ಹೋಗುತ್ತಾರೆಯಾದರೂ ಸಾರ್ವಜನಿಕರಿಗೆ ಮೂಲ ಭೂತ ಸೌಕರ್ಯ ಒದಗಿಸಬೇಕು ಎಂಬ ಪ್ರಜ್ಞೆ ಇಲ್ಲದಿರುವುದು ಖೇದಕರವಾಗಿದೆ.







