ಸರ್ವರ ಸಹಕಾರವಿಲ್ಲದೆ ಕಾಶ್ಮೀರ ಸಮಸ್ಯೆಗೆ ಪರಿಹಾರ ಅಸಾಧ್ಯ: ಮೆಹ್‌ಬೂಬಾ ಮುಫ್ತಿ

ಹೊಸದಿಲ್ಲಿ, ಜು.15: ಕಾಶ್ಮೀರದಲ್ಲಿ ನಮ್ಮ ಹೋರಾಟ ಕಾನೂನು ಸುವ್ಯವಸ್ಥೆಗಾಗಿ ನಡೆಯುತ್ತಿಲ್ಲ. ವಿವಿಧ ರಾಜಕೀಯ ಪಕ್ಷಗಳು ಮತ್ತು ಇಡೀ ರಾಷ್ಟ್ರದ ಸಹಕಾರವಿಲ್ಲದೆ ಈ ಹೋರಾಟದಲ್ಲಿ ಗೆಲುವು ದೊರಕದು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮೆಹ್‌ಬೂಬಾ ಮುಫ್ತಿ ಹೇಳಿದ್ದಾರೆ.
ಶನಿವಾರ ಹೊಸದಿಲ್ಲಿಯಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕಾಶ್ಮೀರದಲ್ಲಿ ನಡೆಯುತ್ತಿರುವ ದಾಳಿ ಪ್ರಕರಣದ ಹಿಂದೆ ವಿದೇಶಿ ಶಕ್ತಿಗಳಿವೆ. ಈಗ ಚೀನಾ ಕೂಡಾ ಈ ವಿಷಯದಲ್ಲಿ ಮೂಗು ತೂರಿಸಲು ಪ್ರಯತ್ನಿಸುತ್ತಿದೆ ಎಂದವರು ಹೇಳಿದರು. ಕಾಶ್ಮೀರ ಸಮಸ್ಯೆಗೆ ಪರಿಹಾರ ಹುಡುಕಲು ರಾಜಕೀಯ ಪಕ್ಷಗಳು ನಡೆಸುತ್ತಿರುವ ಜಂಟಿ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು. ರಾಜ್ಯದಲ್ಲಿ ನೆಲೆಸಿರುವ ಪ್ರಕ್ಷುಬ್ಧ ಪರಿಸ್ಥಿತಿ, ರಾಜಕೀಯ ಹೊಂದಾಣಿಕೆ ಸಾಧಿಸುವಲ್ಲಿ ರಾಜ್ಯದ ಸಚಿವರ ವೈಫಲ್ಯ ಇತ್ಯಾದಿ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
ಅಮರನಾಥ ಯಾತ್ರೆಯ ಮೇಲೆ ನಡೆದ ಉಗ್ರರ ದಾಳಿಯು ಎಲ್ಲಾ ಮುಸ್ಲಿಮರ ಹಾಗೂ ಕಾಶ್ಮೀರದ ಜನತೆಗೆ ಅಂಟಿದ ಕಳಂಕವಾಗಿದೆ ಎಂದವರು ವಿಶ್ಲೇಷಿಸಿದರು. ಅಮರನಾಥ ಯಾತ್ರಿಕರ ಮೇಲೆ ನಡೆದ ಉಗ್ರರ ದಾಳಿಗೆ ಎಲ್ಲೆಡೆಗಳಿಂದಲೂ ಖಂಡನೆ ವ್ಯಕ್ತವಾಗಿರುವುದು ‘ಕಾಶ್ಮೀರಿಯತ್’ ಇನ್ನೂ ಜೀವಂತವಾಗಿದೆ ಎಂಬುದರ ದ್ಯೋತಕವಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ‘ಎಲ್ಲಾ ಕಾಶ್ಮೀರಿಗಳೂ ಉಗ್ರರಲ್ಲ ’ ಎಂದು ಸಿಂಗ್ ಮಾಡಿರುವ ಟ್ವೀಟ್‌ಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.





