ಅನೈತಿಕ ಪೊಲೀಸ್‌ಗಿರಿ ಮಾಡುವವರ ವಿರುದ್ಧ ಗೂಂಡಾಕಾಯ್ದೆಗೆ ಆಗ್ರಹ
‘ಗೋ ಭಯೋತ್ಪಾದನೆ ನಿಲ್ಲಿಸಿ’ ಪ್ರತಿಭಟನೆ

ಬೆಂಗಳೂರು, ಜು.15: ದೇಶದಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ದಲಿತರು ಮತ್ತು ಮುಸ್ಲಿಮರ ಮೇಲೆ ದೌರ್ಜನ್ಯಗಳನ್ನು ನಡೆಸುವ ಮೂಲಕ ಶೋಷಿತ ಸಮುದಾಯಗಳನ್ನು ಹಿಂದೂರಾಷ್ಟ್ರದ ಗುಲಾಮಗಿರಿಯಲ್ಲಿ ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ದಲಿತ ಮೈನಾರಿಟಿಸ್ ಸೇನೆ ಕಾರ್ಯಾಧ್ಯಕ್ಷ ಎ.ಜೆ.ಖಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಆಯೋಜಿಸಲಾಗಿದ್ದ ‘ಗೋ ಭಯೋತ್ಪಾದನೆ ನಿಲ್ಲಿಸಿ’ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋ ರಕ್ಷಣೆಯ ಹೆಸರಿನಲ್ಲಿ ಅನೈತಿಕ ಪೊಲೀಸ್‌ಗಿರಿ ಮಾಡುತ್ತಿರುವವರನ್ನು ಈ ಕೂಡಲೇ ಗೂಂಡಾಕಾಯ್ದೆಯಡಿಯಲ್ಲಿ ಬಂಧಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಮಾಜದ ಶಾಂತಿ ಭಂಗ ಮಾಡುತ್ತಿರುವ ಸಂಘಪರಿವಾರದ ಸದಸ್ಯರಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದಲ್ಲಿ, ದೇಶದ ಬಹುಜನರು ಮುಂಬರುವ ದಿನಗಳಲ್ಲಿ ಉಗ್ರ ರೀತಿಯ ಹೋರಾಟ ಕೈಗೊಳ್ಳ ಬೇಕಾಗುತ್ತದೆ ಎಂದು ಎ.ಜೆ.ಖಾನ್ ಎಚ್ಚರಿಕೆ ನೀಡಿದರು.
ಬಿಜೆಪಿ ಸಂಸದರಾದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ರಾಜ್ಯಕ್ಕೆ ಬೆಂಕಿ ಹಚ್ಚುವ ಮಾತುಗಳನ್ನಾಡುತ್ತಿದ್ದಾರೆ. ಇಂತಹವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಬಂಧಿಸಬೇಕು ಎಂದು ಎ.ಜೆ.ಖಾನ್ ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಬಕ್ರೀದ್ ಹಬ್ಬ ಬರುತ್ತಿದೆ. ರಾಜ್ಯದಲ್ಲಿರುವ ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಮರಿಗೆ ಸರಕಾರ ರಕ್ಷಣೆ ಒದಗಿಸಬೇಕು. ಯಾವುದೆ ರೀತಿಯ ಅಹಿತಕರ ಘಟನೆ ನಡೆದರೆ ಆಯಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‌ಗಳನ್ನೆ ಹೊಣೆಗಾರರನ್ನಾಗಿ ಮಾಡಬೇಕು. ದಲಿತರ ಭಡ್ತಿ ಮೀಸಲಾತಿಯನ್ನು ಈ ಕೇಂದ್ರ ಸರಕಾರ ಕಸಿದುಕೊಂಡಿದೆ ಎಂದು ಅವರು ಕಿಡಿಗಾರಿದರು.
ಗೋರಕ್ಷಣೆಯ ಹೆಸರಿನಲ್ಲಿ ಕೇಂದ್ರ ಪರಿಸರ ಇಲಾಖೆ ಹೊರಡಿಸಿರುವ ಸುತ್ತೋಲೆ ಸಂವಿಧಾನದ ವಿರುದ್ಧವಾಗಿದೆ ಎಂಬ ಕಾರಣಕ್ಕಾಗಿಯೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದೆ. ಈ ಸುತ್ತೋಲೆಯು ಶೋಷಿತ ಸಮುದಾಯಗಳ ಮೇಲೆ ದೌರ್ಜನ್ಯ ಮಾಡುವ ಅಸ್ತ್ರವಾಗಿದೆ ಎಂದು ಅವರು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಗೋ ರಕ್ಷಣೆಯ ಹೆಸರಿನಲ್ಲಿ ಮನುಷ್ಯರ ಹತ್ಯೆ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಪರೋಕ್ಷವಾಗಿ ಇಂತಹ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಎ.ಜೆ.ಖಾನ್ ಆಕ್ರೋಶ ವ್ಯಕ್ತಪಡಿಸಿದರು.
ಗೋ ರಕ್ಷಣೆಯ ಹೆಸರಿನಲ್ಲಿ ನಡೆಯುತ್ತಿರುವ ದ್ವೇಷದ ರಾಜಕಾರಣವನ್ನು ಅಂಬೇಡ್ಕರ್ ಹಾಗೂ ಟಿಪ್ಪುಸುಲ್ತಾನ್ ಮಾರ್ಗದರ್ಶನದಲ್ಲಿ ಎದುರಿಸುತ್ತೇವೆ. ಕೋರೆಗಾಂವ್ ಯುದ್ಧಕ್ಕೆ 200 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಬೃಹತ್ ಹೋರಾಟವನ್ನು ರೂಪಿಸ ಲಾಗುವುದು ಎಂದು ಅವರು ಹೇಳಿದರು.
ಪ್ರತಿಭಟನೆಯಲ್ಲಿ ದಲಿತ ಮೈನಾರಟಿಸ್ ಸೇನೆಯ ರಾಜ್ಯಾಧ್ಯಕ್ಷ ಸಿ.ಎಸ್.ರಘು, ಕರ್ನಾಟಕ ದಲಿತರ ಮೈನಾರಿಟಿಸ್ ಸೇನೆಯ ರಾಜ್ಯಾಧ್ಯಕ್ಷ ಅಯ್ಯಪ್ಪ, ಪ್ರಧಾನ ಕಾರ್ಯದರ್ಶಿ ಶರವಣ, ದಲಿತ ಫ್ಯಾಂಥರ್ಸ್ ಆಫ್ ಕರ್ನಾಟಕ ಅಧ್ಯಕ್ಷ ಕೆ.ಸಿ.ನಾಗರಾಜ್, ಮುಸ್ಲಿಂ ಜಾಗೃತಿ ಬಳಗದ ಸದಸ್ಯ ಖಾಸೀಂ ಸಾಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







