ಪರಪ್ಪನ ಅಗ್ರಹಾರ-ಅಕ್ರಮ: ‘ಭಾಗ-2’ ವರದಿ ಸಲ್ಲಿಸಿದ ಡಿಐಜಿ ಡಿ.ರೂಪಾ

ಬೆಂಗಳೂರು, ಜು.15: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ಮೊದಲ ವರದಿಯಲ್ಲಿ ಬಯಲಿಗೆ ತಂದ ಡಿಐಜಿ ಡಿ.ರೂಪಾ, ಮತ್ತೆ ಎರಡನೆ ವರದಿಯನ್ನೂ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ಸಲ್ಲಿಸಿರುವುದಾಗಿ ಗೊತ್ತಾಗಿದೆ.
ಶನಿವಾರ ‘ಭಾಗ-2’ವರದಿಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ, ಕಾರಾಗೃಹ ಡಿಜಿಪಿ ಸತ್ಯನಾರಾಯಣರಾವ್ ಅವರಿಗೆ ಲಿಖಿತ ರೂಪದಲ್ಲಿ ಸಲ್ಲಿಸಲಾಗಿದ್ದು, ಈ ಎರಡನೆ ವರದಿಯಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರ ಬಗ್ಗೆ ಉಲ್ಲೇಖ ಮಾಡಿಲ್ಲ ಎಂದು ತಿಳಿದುಬಂದಿದೆ.
ಪರಪ್ಪನ ಅಗ್ರಹಾರಕ್ಕೆ ಭೇಟಿ ನೀಡಿದ್ದ ವೇಳೆ ಹ್ಯಾಂಡಿಕ್ಯಾಮ್ ಮೂಲಕ ಎಲ್ಲವನ್ನೂ ಚಿತ್ರೀಕರಣ ಮಾಡಿಕೊಂಡಿದ್ದೆ. ಇಲ್ಲಿ ಕ್ಯಾಮೆರಾ ಅಳವಡಿಸಿದ್ದರಿಂದ ಯಾವುದೇ ರೀತಿಯ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ನೆಟ್‌ವರ್ಕ್ ಕಡಿತಗೊಂಡಿರುತ್ತದೆ. ಹೀಗಾಗಿ ಹ್ಯಾಂಡಿಕ್ಯಾಮ್‌ನಲ್ಲಿ ಅಲ್ಲಿನ ನೈಜ ಚಿತ್ರಣವನ್ನು ಸೆರೆ ಹಿಡಿದು ತಮ್ಮ ಕೆಳ ಹಂತದ ಅಧಿಕಾರಿಯೊಬ್ಬರಿಗೆ ಇದನ್ನು ಡೌನ್‌ಲೋಡ್ ಮಾಡಿ ಪೆನ್‌ಡ್ರೈವ್‌ಗೆ ಹಾಕುವಂತೆ ಸೂಚಿಸಿದ್ದೆ ಎಂದು ವರದಿಯಲ್ಲಿ ಡಿ.ರೂಪಾ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಸೂಚನೆಯಂತೆ ಹ್ಯಾಂಡಿಕ್ಯಾಮ್‌ನಲ್ಲಿದ್ದ ಚಿತ್ರಣವನ್ನು ವೀಕ್ಷಿಸಿದ ಅಧಿಕಾರಿ ಸಂಪೂರ್ಣವಾಗಿ ಅದನ್ನು ನಾಶಪಡಿಸಿ ಖಾಲಿ ಪೆನ್‌ಡ್ರೈವ್‌ಗೆ ಬೇರೆ ಯಾವುದೋ ಚಿತ್ರಗಳನ್ನು ಕಾಪಿ ಮಾಡಿದ್ದಾರೆ. ಅಲ್ಲದೆ, ತಾವು ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿ ಅನೇಕ ಸಿಸಿಟಿವಿಗಳನ್ನು ಬಂದ್ ಮಾಡಲಾಗಿತ್ತು. ಇದೂ ಕೂಡ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ವರದಿಯಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯದ ನಿರ್ದೇಶನ ಇಲ್ಲದಿದ್ದರೂ ಶಶಿಕಲಾ, ಅಬ್ದುಲ್ ಕರೀಂಲಾಲ್ ತೆಲಗಿ ಸೇರಿ ಅನೇಕರಿಗೆ ಪ್ರತ್ಯೇಕ ಊಟ, ಕೊಠಡಿ, ಬಟ್ಟೆ ಸೇರಿದಂತೆ ಎಲ್ಲ್ಲ ರೀತಿಯ ಸವಲತ್ತುಗಳನ್ನು ನೀಡಲಾಗುತ್ತಿದೆ.
ಅಧಿಕಾರಿಗಳ ಕೈ ಬೆಚ್ಚಗೆ ಮಾಡಿದರೆ ಇಲ್ಲಿ ಎಲ್ಲವೂ ರಾಜಾರೋಷವಾಗಿ ಸಿಗುತ್ತದೆ. ಶಶಿಕಲಾಗೆ ಪ್ರತ್ಯೇಕ ಕೊಠಡಿ, ಊಟ, ಟಿವಿ, ಮೊಬೈಲ್, ಹಾಸಿಗೆ, ದಿಂಬು, ಅತಿಥಿಗಳ ಭೇಟಿಗೆ ಪ್ರತ್ಯೇಕ ಕೊಠಡಿಯನ್ನು ನೀಡಲಾಗಿತ್ತು. ಇದೇ ಸೌಲಭ್ಯಗಳನ್ನು ತೆಲಗಿಗೂ ಸಹ ನೀಡಲಾಗಿತ್ತು ಎಂದು ತಾವು ನೀಡಿರುವ ಎರಡನೇ ವರದಿಯಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿ ಜೈಲಿನಲ್ಲಿರುವ ಮೂರು ವಿಚಾರಣಾಧೀನ ಕೈದಿಗಳಿಗೆ ವಕೀಲರು ಇಲ್ಲ ಎನ್ನುವ ಮಾಹಿತಿ ಗೊತ್ತಾಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.







