ಬಿಎಸ್‌ವೈ ನಿವಾಸಕ್ಕೆ ಯುವ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ಸಾಲಮನ್ನಾಕ್ಕೆ ಆಗ್ರಹ
.jpg)
ಬೆಂಗಳೂರು, ಜು. 15: ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರ ಕೃಷಿ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನಿವಾಸಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ಇಲ್ಲಿನ ಡಾಲರ್ಸ್ ಕಾಲನಿಯಲ್ಲಿರುವ ಬಿಎಸ್‌ವೈ ನಿವಾಸಕ್ಕೆ ಮುತ್ತಿಗೆ ಹಾಕಲು ಮುಂದಾದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಕಾರ್ಯಕರ್ತರ ಮಧ್ಯೆ ಕೆಲ ಕಾಲ ವಾಗ್ವಾದ, ಮಾತಿನ ಚಕಮಕಿಯೂ ನಡೆಯಿತು.
ಈ ವೇಳೆ ಮಾತನಾಡಿದ ಯುವ ಕಾಂಗ್ರೆಸ್ ಉಪಾಧ್ಯಕ್ಷ ಕೆಂಪರಾಜು, ಈಗಾಗಲೇ ರಾಜ್ಯ ಸರಕಾರ ಸಹಕಾರಿ ಬ್ಯಾಂಕುಗಳಲ್ಲಿ ರೈತರು ಪಡೆದಿದ್ದ 50 ಸಾವಿರ ರೂ.ವರೆಗಿನ ಬೆಳೆ ಸಾಲಮನ್ನಾ ಮಾಡಿದೆ. ಆದರೆ, ರಾಜ್ಯದಿಂದ ಆಯ್ಕೆಯಾಗಿರುವ 17 ಮಂದಿ ಸಂಸದರು ರೈತರ ಸಾಲಮನ್ನಾ ಬಗ್ಗೆ ತುಟಿ ಬಿಚ್ಚುತ್ತ್ತಿಲ್ಲ ಎಂದು ದೂರಿದರು.
ಹಿಂದೂ-ಮುಸ್ಲಿಮರ ಹೆಸರಿನಲ್ಲಿ ಬಿಜೆಪಿ ಮುಖಂಡರು ಒಡೆದು ಆಳುವ ರಾಜಕೀಯ ನೀತಿಯನ್ನು ಕೈಬಿಟ್ಟು, ಬರ ಸ್ಥಿತಿ ಹಿನ್ನೆಲೆಯಲ್ಲಿ ಕಂಗೆಟ್ಟಿರುವ ರಾಜ್ಯದ ಜನತೆಗೆ ನೆರವಿಗೆ ಧಾವಿಸಬೇಕು. ಬಿಜೆಪಿ ಸಂಸದರಿಗೆ ರಾಜ್ಯದ ಬಗ್ಗೆ ಕನಿಷ್ಠ ಕಳಕಳಿ ಇದ್ದರೆ ಕೂಡಲೇ ಪ್ರಧಾನಿ ಮೋದಿಯವರ ಮೇಲೆ ಒತ್ತಡ ಹೇರಿ ರೈತರ ಸಾಲಮನ್ನಾ ಮಾಡಿಸಬೇಕೆಂದು ಅವರು ಒತ್ತಾಯಿಸಿದರು.
ಆ ಬಳಿಕ ಕೆಂಪರಾಜು ನೇತೃತ್ವದ ನಿಯೋಗ, ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿತು. ಮುಖಂಡರಾದ ಸುಮಯ್ಯ ತಬ್ರೇಝ್, ಶಿವಕುಮಾರ್, ಉಮೇಶ್ ಬೋರೆಗೌಡ, ವಿಶ್ವನಾಥ್, ರಕ್ಷಿತ್ ಸೇರಿದಂತೆ ಇನ್ನಿತರರು ಹೋರಾಟದಲ್ಲಿ ಪಾಲ್ಗೊಂಡಿದ್ದರು.







